ಹೊಸಕೋಟಿಯಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

| Published : Apr 30 2024, 02:03 AM IST

ಸಾರಾಂಶ

ಬಾದಾಮಿ ತಾಲೂಕುಮಟ್ಟದ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯವಿವಾಹ ತಡೆದ ಘಟನೆ ತಾಲೂಕಿನ ಹೊಸಕೋಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬಾದಾಮಿ

ತಾಲೂಕುಮಟ್ಟದ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದ ಘಟನೆ ತಾಲೂಕಿನ ಹೊಸಕೋಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಏ.23ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದು, ತಡೆಯುವಂತೆ ಕರೆ ಬಂದಿತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು 10 ಗಂಟೆಗೆ ಬಾಲಕಿಯ ಮನೆಗೆ ಭೇಟಿ ನೀಡಿ ಪಾಲಕರಿಗೆ ತಿಳಿವಳಿಕೆ ನೀಡಿ ಬಾಲ್ಯವಿವಾಹ ತಡೆದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಪಿ.ಎಸ್.ಐ ಆನಂದ ಆದಗೊಂಡ ಪಾಲಕರಿಗೆ ಬಾಲ್ಯವಿವಾಹ ಮಾಡದಂತೆ ತಿಳಿವಳಿಕೆ ನೀಡಿ, ಬಾಲ್ಯವಿವಾಹ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ತೋಟದ ಮನೆಗೆ ಭೇಟಿ ನೀಡಿ ವರನಿಗೆ ಬಾಲ್ಯವಿವಾಹ ಅಪರಾಧದ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎ.ಹದ್ಲಿ, ಕೈನಕಟ್ಟಿ ಪಿಡಿಒ ಸದಾನಂದ ಪರಸನ್ನವರ, ಅಂಗನವಾಡಿ ಮೇಲ್ವಿಚಾರಕಿ ಯಲ್ಲಮ್ಮ ನಾಯ್ಕರ, ನರೆನೂರ ಸಮೂಹ ಸಂಪಪನ್ಮೂಲ ವ್ಯಕ್ತಿ ಎಚ್.ಬಿ.ಗುನ್ನನ್ನವರ, ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಆರ್.ಹೆಳವರ, ಗ್ರಾಮ ಆಡಳಿತಾಧಿಕಾರಿ ಸುನಿತಾ ಹುಡೇದ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸಾಲಿಮಠ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.