ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕಡಿಮೆಯಾದಲ್ಲಿ ಸರ್ಕಾರದಿಂದ ಮಾನವ ದಿನ ಸೃಜಿಸುವುದು ಅನಿವಾರ್ಯವಾಗಲಿದೆ.
ಕೊಪ್ಪಳ: ಮುಂಗಾರು ಋತುವಿನಲ್ಲಿ ಮಳೆಯ ಕೊರತೆಯ ಮುನ್ಸೂಚನೆ ಕಾಣುತ್ತಿದ್ದು, ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಿದ್ಧರಾಗಬೇಕು, ಕುಡಿವ ನೀರು ಒದಗಿಸಲು ಹಾಗೂ ಉದ್ಯೋಗ ಒದಗಿಸುವ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಮೇಲುಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕಡಿಮೆಯಾದಲ್ಲಿ ಸರ್ಕಾರದಿಂದ ಮಾನವ ದಿನ ಸೃಜಿಸುವುದು ಅನಿವಾರ್ಯವಾಗಲಿದೆ. ಅಗತ್ಯವಿರುವ ಕಾಮಗಾರಿಗಳ ಬಗ್ಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಬೇಕು. ಜಾಬ್ ಕಾರ್ಡ್ ವಿತರಣೆಗೆ ಕ್ರಮ ವಹಿಸಬೇಕು. ಬೆಳೆ ವಿಮಾ ಯೋಜನೆಗೆ ಅರ್ಹ ರೈತರು ನೋಂದಣಿ ಮಾಡಿಕೊಳ್ಳುವಂತೆ ಕೃಷಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.
ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದ ರೈತರಿಗೆ ಬಿತ್ತನೆಗೆ ಅಡಚಣೆ ಉಂಟಾಗಿರುವುದು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಅನುದಾನ ಬಳಸಿಕೊಂಡು ಅಗತ್ಯವಿರುವೆಡೆ ಆದ್ಯತೆ ಮೇರೆಗೆ ಕುಡಿವ ನೀರು ಪೂರೈಕೆ ಮಾಡಿ, ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯುವುದು, ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅಥವಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವುದು ಮುಂತಾದ ಪರಿಹಾರೋಪಾಯ ಆದ್ಯತೆ ಮೇರೆಗೆ ನಿರ್ವಹಿಸಿ ಎಂದರು.ರೈತರ ಬೇಡಿಕೆಯನುಸಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಅಗತ್ಯ ದಾಸ್ತಾನು ಸಂಗ್ರಹಿಸಿ. ಹಾಗೇ ಖಾಸಗಿ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ಅಥವಾ ರಸಗೊಬ್ಬರ ನಿಯಮಾನುಸಾರ ವಿತರಣೆ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಕಳಪೆ ಗುಣಮಟ್ಟದ ಬೀಜ, ಕಲಬೆರಕೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಥವಾ ರಸಗೊಬ್ಬರ, ಬಿತ್ತನೆ ಬೀಜಗಳ ನಿಗದಿತ ದರ, ದಾಸ್ತಾನು ವಿವರ ಮಳಿಗೆಗಳಲ್ಲಿ ಪ್ರದರ್ಶಿಸದೇ ಇದ್ದಲ್ಲಿ ಅಂತಹ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಠಿಸಬಾರದು. ಈ ಬಗ್ಗೆ ಪರಿಶೀಲನೆಗಾಗಿ ಇಲಾಖೆಯ ಅಧಿಕಾರಿ ನಿಯೋಜಿಸಬೇಕು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜೆಜೆಎಂ ಅಡಿ ಪೂರೈಕೆಯಾಗುವ ನೀರಿನಲ್ಲಿ ವ್ಯತ್ಯಯವಾಗುತ್ತಿದೆ. ಶಾಲಾ-ಕಾಲೇಜುಗಳ ಸಮಯಕ್ಕೆ ಅನುಕೂಲವಾಗುವಂತೆ ಬಸ್ ಒದಗಿಸಬೇಕು ಎಂದರು.ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಯಲಬುರ್ಗಾ ಹಾಗೂ ಕುಕನೂರ ತಾಲೂಕುಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣುತ್ತಿದೆ. ಬಿತ್ತನೆ ಪ್ರಮಾಣ ಕಡಿಮೆ ಆಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಪಂ ಉಪಕಾರ್ಯದರ್ಶಿ, ತೋಟಗಾರಿಕೆ ಹಾಗೂ ಕೃಷಿ ಜಂಟಿ ನಿರ್ದೇಶಕರು ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅವರನ್ನೊಳಗೊಂಡ ಅಧಿಕಾರಿಗಳ ತಂಡ ರಚನೆಯಾಗಬೇಕು. ಈ ತಂಡವು ಜಿಲ್ಲೆಯ ಎಲ್ಲ ತಾಲೂಕಿಗೆ ಸಂಚರಿಸಿ ಆಯಾ ಕಡೆಗಳಲ್ಲಿ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿ, ಬಿಇಓ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿತ್ತನೆ ಪ್ರಮಾಣ, ಕುಡಿವ ನೀರಿನ ಪರಿಸ್ಥಿತಿ ಸೇರಿದಂತೆ ಮಳೆ ಕೊರತೆಯ ಹಿನ್ನೆಲೆ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸನ್ನಿವೇಶ ಎದುರಿಸಲು ಜಿಲ್ಲಾಡಳಿತ ಸಿದ್ದವಾಗಿದೆ. ಜೀವ ಹಾನಿ ಪ್ರಕರಣಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ. ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಒದಗಿಸಿದೆ. 39 ಪ್ರಾಣಿಗಳು ಮರಣ ಹೊಂದಿದ್ದು ಸೂಕ್ತ ಪರಿಹಾರ ವಿತರಣೆ ಮಾಡಲಾಗಿದೆ. ಮಳೆಯಿಂದ ಭಾಗಶಃ ಹಾನಿಯಾದ 44 ಮನೆಗಳಿಗೆ ಪರಿಹಾರ ಒದಗಿಸಿದೆ. ಕುಡಿಯುವ ನೀರು ಪೂರೈಕೆಗೆ ಅನುದಾನದ ಕೊರತೆ ಇಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿದರು.ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಸಾಮಾನ್ಯ ಬಿತ್ತನೆ ಗುರಿ 3,49,892 ಹೆಕ್ಟೇರ್ ಆಗಿದ್ದು, ಇದುವರೆಗೂ 1,63,546 ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.47 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇದುವರೆಗೂ 3,203 ಅರ್ಜಿಗಳು ಸ್ವೀಕೃತಗೊಂಡಿದೆ ಎಂದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಉಪವಿಭಾಗಾಧಿಕಾರಿ ಮಹಮ್ಮದ್ ಜೀಲಾನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.