ಸಾರಾಂಶ
ಒಂದೆಡೆ ನದಿಗೆ ಅಪಾರ ಪ್ರಮಾಣದ ನೀರು ಹಾಗೂ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ. ಕೊಪ್ಪಳ ಶಾಸಕ, ಸಂಸದರ ಊರು ಸೇರಿ 10 ಹಳ್ಳಿ ಹಾಗೂ 20,000 ಎಕರೆ ಪ್ರದೇಶಕ್ಕೆ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ನೀರುಣಿಸುತ್ತದೆ. ಆದರೆ, ಅಧಿಕಾರಿಗಳ ತಪ್ಪಿನಿಂದ ಟ್ಯಾಂಕರ್ ನೀರು ತಂದು ಸಸಿ ನಾಟಿ ಮಾಡಬೇಕಾದ ಪರಿಸ್ಥಿತಿ ಇದೆ.
ಮುನಿರಾಬಾದ್:
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 1ರಿಂದ ನಿತ್ಯ 25 ಕ್ಯುಸೆಕ್ ಹಾಗೂ ಎಡದಂಡೆ ಮುಖ್ಯ ಕಾಲುವೆಗೆ ಜು. 2ರಿಂದ 3100 ಕ್ಯುಸೆಕ್ ನೀರು ಹರಿಸಬೇಕೆಂದು ನಿರ್ಧರಿಸಿದ್ದರೂ ಅಧಿಕಾರಿಗಳು ಶುಕ್ರವಾರದ ವರೆಗೂ ನೀರು ಹರಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಂಜೆ ಬಳಿಕ ಕಾಲುವೆಗೆ ನೀರು ಬಿಟ್ಟಿದ್ದಾರೆ.ಕಾಲುವೆಗೆ ನೀರು ಹರಿಸದೆ, ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನ ಲೆಕ್ಕಿಸದೆ ನೀರಾವರಿ ಇಲಾಖೆ ಅಭಿಯಂತರು ಕರ್ತವ್ಯ ಲೋಪವೆಸಗಿದ್ದಾರೆಂದ ರೈತ ಮುಖಂಡಖಾಜಾ ಹುಸೇನ್ ದೊಡ್ಡನಿ, ಒಂದೆಡೆ ನದಿಗೆ ಅಪಾರ ಪ್ರಮಾಣದ ನೀರು ಹಾಗೂ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ. ಕೊಪ್ಪಳ ಶಾಸಕ, ಸಂಸದರ ಊರು ಸೇರಿ 10 ಹಳ್ಳಿ ಹಾಗೂ 20,000 ಎಕರೆ ಪ್ರದೇಶಕ್ಕೆ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ನೀರುಣಿಸುತ್ತದೆ. ಆದರೆ, ಅಧಿಕಾರಿಗಳ ತಪ್ಪಿನಿಂದ ಟ್ಯಾಂಕರ್ ನೀರು ತಂದು ಸಸಿ ನಾಟಿ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಪಲಕ ಅಭಿಯಂತರ ಗಿರೀಶ್ ಮೇಟಿ ಅವರು ಎರಡನೇ ಬಾರಿ ಸಲಹಾ ಸಮಿತಿ ಸಭೆಯ ಆದೇಶವನ್ನು ಉಲ್ಲಂಘಿಸಿದ್ದಾರೆ. ಶೀಘ್ರವೇ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಸಬೇಕು ಮತ್ತು ಪ್ರಮಾದವೆಸಗಿದ ಅಧಿಕಾರಿ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿಎಚ್ಚರಿಕೆ ನೀಡಿದ್ದಾರೆ.
ಕಾರ್ಯಪಾಲಕ ಅಭಿಯಂತರ ಗಿರೀಶ್ ಮೇಟಿ ಮಾತನಾಡಿ, ಕಾಲುವೆಯಲ್ಲಿ ಕೆಲಸಗಳಿದ್ದ ಕಾರಣ ನೀರು ಹರಿಸಿರಲಿಲ್ಲ. ಆದರೆ, ಶುಕ್ರವಾರ ಸಂಜೆಯಿಂದ ಕಾಲುವೆಯಲ್ಲಿ ನೀರು ಹರಿಸಲಾಗಿದೆ ಎಂದರು.