ಸಾರಾಂಶ
ಧಾರವಾಡ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರ ವಿದ್ಯುತ್ ಸಂಬಂಧಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ವಿದ್ಯುತ್ ಸರಬರಾಜು ಸ್ಥಿತಿಗತಿ ಕುರಿತು ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಟ್ರಾನ್ಸಫಾರ್ಮರ್‌ಗಳು ಸುಟ್ಟಾಗ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳತಕ್ಕದ್ದು. ರೈತರು ಅಹವಾಲು ಸಲ್ಲಿಸಲು 1912 ಟೋಲ್ ಫ್ರೀ ದೂರವಾಣಿಗೆ ಬರುವ ಅಹವಾಲುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಪಂದಿಸುವಂತೆ ತಿಳಿಸಿದರು. ಟ್ರಾನ್ಸಫಾರ್ಮರ್‌ಗಳು ಸುಟ್ಟ ತಕ್ಷಣವೇ ರೈತರೇ ಫೋನ್ ಮಾಡಿ ತಿಳಿಸುವುದಕ್ಕಿಂತ ಮುಂಚೆಯೇ ಹೆಸ್ಕಾಂ ಇಲಾಖೆಗೆ ನೇರವಾಗಿ ತಿಳಿಯುವಂತೆ ತಂತ್ರಜ್ಞಾನವನ್ನು ರೂಪಿಸುವಂತೆ ಸೂಚಿಸಿದರು.ಅಕ್ರಮ-ಸಕ್ರಮ ಪಂಪ್‌ಸೆಟ್ ಯೋಜನೆಯಡಿ ಟ್ರಾನ್ಸಫಾರ್ಮರ್‌ನಿಂದ 500 ಮೀಟರ್ ಅಂತರದೊಳಗಿರುವ ಪಂಪ್‌ಸೆಟ್ ಮಾಲೀಕರು ₹10 ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ. 500 ಮೀಟರ್ ಅಂತರ ಮೇಲ್ಪಟವರಿಗೆ ಸೋಲಾರ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 8-10 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆಂದು ಸಚಿವರು ತಿಳಿಸಿದರು.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೆಸ್ಕಾಂ ಅಧಿಕಾರಿಗಳು ದಶಕಗಳ ಮುಂದಾಲೋಚನೆ ಇಟ್ಟುಕೊಂಡು ತಾಂತ್ರಿಕತೆ ಬಳಸಬೇಕು. ವಿದ್ಯುತ್ ಸಂಬಂಧಿಸಿದ ಯಾವುದೇ ಸಮಸ್ಯೆ ಪರಿಹರಿಸಲು ತಾಂತ್ರಿಕ ಸಿಬ್ಬಂದಿಗಳು ನಿರಂತರ ಸಿದ್ಧರಿರಬೇಕೆಂದು ಸೂಚಿಸಿದರು.ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಶನ್ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಹುಬ್ಬಳ್ಳಿ ವಿಭಾಗವು ಅನೇಕ ರೀತಿಯಲ್ಲಿ ಚೇತರಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿದೆ. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಒಳಚರಂಡಿ ಕಾಮಗಾರಿ, ಸ್ಮಾರ್ಟಸಿಟಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಬಿ.ಆರ್.ಟಿ.ಎಸ್ ವಿಭಾಗಗಳಿಂದ ಉಂಟಾಗುವ ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತಿದೆ. ಹುಬ್ಬಳ್ಳಿಯ 18 ಸ್ಥಳಗಳಲ್ಲಿ ಲೋಪ ಕಂಡುಬಂದಿದ್ದು ರಿಪೇರಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕರ್ನಾಟಕ ಕಾಲೇಜು ಸುತ್ತಲಿನ ವ್ಯಾಪ್ತಿಯಲ್ಲಿ ಈಗಿರುವ 33 ಕೆವಿ ಸ್ಟೇಶನ್ ಲೋಡ್ ಹೆಚ್ಚಾಗಿದ್ದು, 110 ಕೆವಿ ಸ್ಟೇಶನ್ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಭೂಮಿ ನೀಡಿದ್ದು, ಆಧುನಿಕ ತಂತ್ರಜ್ಞಾನದ ಸ್ಟೇಶನ್ ನಿರ್ಮಾಣ ಕುರಿತು ಯೋಚಿಸಲಾಗುತ್ತಿದೆ. ಅವಳಿನಗರಗಳ ಕೆಲ ಲೇಔಟ್‌ಗಳಲ್ಲಿ ಎಲ್.ಟಿ ಮಾರ್ಗಗಳಲ್ಲಿ ಕೆಲವೆಡೆ ಲೋಪ ಕಂಡು ಬಂದಿದ್ದು ಸರ್ವೇ ಮಾಡಿ ಸಮಸ್ಯೆ ಬಗೆಹರಿಸಲಾಗುವುದೆಂದರು.ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಬಂಧಿಸಿದ ಮುಂಜಾಗ್ರತಾ ನಿರ್ವಹಣಾ ರೀಪೇರಿ ಕಾಮಗಾರಿ ₹ 8 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದೆಂದರು.
ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಹೆಸ್ಕಾಂ ಅಧಿಕಾರಿಗಳು ಇದ್ದರು.