ಅಧಿಕಾರಿಗಳು ಕರ್ತವ್ಯನಿಷ್ಠೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ: ವಿನೋದ್ ಅಣ್ವೇಕರ್

| Published : Jun 23 2024, 02:09 AM IST

ಅಧಿಕಾರಿಗಳು ಕರ್ತವ್ಯನಿಷ್ಠೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ: ವಿನೋದ್ ಅಣ್ವೇಕರ್
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾವರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾವರ

ಅಧಿಕಾರಿಗಳು ದೂರದೃಷ್ಟಿತ್ವವನ್ನಿಟ್ಟು ಕಾರ್ಯನಿರ್ವಹಿಸಬೇಕು. ಜನತೆಗೆ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಾಪಂ ಆಡಳಿತ ಅಧಿಕಾರಿ ವಿನೋದ್ ಅಣ್ವೇಕರ್ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಅಧಿಕಾರಿಗಳ ಕರ್ತವ್ಯನಿಷ್ಠೆ, ಶ್ರದ್ಧೆ ಆಡಳಿತ ವ್ಯವಸ್ಥೆ ಉತ್ತಮವಾಗಿಸಲು ಸಹಕಾರಿಯಾಗುತ್ತದೆ. ಅದೇ ರೀತಿ ಶೈಕ್ಷಣಿಕವಾಗಿ, ಅಕ್ಷರದಾಸೋಹ ಕೊರತೆಗಳ ಬಗ್ಗೆ ಗಮನ ಹರಿಸುವುದು, ಪ್ರವಾಹ ಮುನ್ನೆಚ್ಚರಿಕೆ ಇವೆಲ್ಲವುಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಬಿಇಒ ಜಿ.ಎಸ್. ನಾಯ್ಕ ಮಾತನಾಡಿ, ಶಾಲೆಗಳಿಗೆ 144 ಶಿಕ್ಷಕರ ಕೊರತೆ ಇತ್ತು. 40 ಮುಖ್ಯಾಧ್ಯಾಪಕ ಹುದ್ದೆ ಖಾಲಿ ಇದೆ. ಈಗಾಗಲೇ 107 ಅತಿಥಿ ಶಿಕ್ಷಕರ ನೀಡಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಹೊನ್ನಾವರ ತಾಲೂಕು ಶೇ. 96.42 ಫಲಿತಾಂಶದ ಮೂಲಕ ಮೊದಲ ಸ್ಥಾನದಲ್ಲಿದೆ ಎಂದರು.ಶಾಲೆಗಳಿಗೆ ದುರಸ್ತಿ ಕಾರ್ಯದ ಅವಶ್ಯಕತೆ ಇದೆಯೇ? ಎಂದು ವಿನೋದ ಅಣ್ವೇಕರ್ ಪ್ರಶ್ನಿಸಿದರು. ಈ ವರ್ಷ ₹36 ಲಕ್ಷ ಅನುದಾನ ಬಿಡುಗಡೆಯಾಗಿ, ಕಾಮಗಾರಿಗೆ ಅನುಮೋದನೆ ದೊರಕಿದೆ ಎಂದರು‌.

ಉಷಾ ಹಾಸ್ಯಗಾರ ಮಾತನಾಡಿ, ತಾಲೂಕಿನಲ್ಲಿ ಡೆಂಘೀ ಪ್ರಕರಣ ಹೆಚ್ಚುತ್ತಿದೆ. ಜಾಗೃತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಫಾಗಿಂಗ್ ಮಷಿನ್‌ಗಳ ಅವಶ್ಯಕತೆ ಇದೆ. ಕೆಲವೊಂದು ದುರಸ್ತಿಯಲ್ಲಿದೆ. ಗ್ರಾಪಂನವರು ಪ್ರಸ್ತಾವನೆ ಇಟ್ಟರೆ ಫಾಗಿಂಗ್‌ಗೆ ಬೇಕಾಗುವ ಅಗತ್ಯವಿರುವ ಸಲಕರಣೆಗಳನ್ನು ನೀಡಲಾಗುವುದು ಎಂದರು.

ಕೃಷಿ ಇಲಾಖಾ ಅಧಿಕಾರಿ ಪಾಂಡಪ್ಪ ಲಮಾಣಿ ಮಾತನಾಡಿ, ಯಾವುದೇ ಕೊರತೆ ಆಗದಂತೆ ಬೀಜ ನಿಗಮದಿಂದ ಪಡೆಯುತ್ತೇವೆ. ವಾಡಿಕೆಗಿಂತ ಉತ್ತಮ ಮಳೆ ಆಗಿದೆ ಎಂದರು‌. ರೈತರು ಕೃಷಿ ಭೂಮಿಯನ್ನು ಬೀಳು ಬಿಡುವುದನ್ನು ತಪ್ಪಿಸಿ. ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಇಲಾಖಾ ಅಧಿಕಾರಿಗಳಿಗೆ ಅಣ್ವೇಕರ್ ಸಲಹೆ ನೀಡಿದರು.

ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರು ಬಂದಿದೆ. ಕೂಡಲೇ ಕ್ರಮವಹಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅಣ್ವೇಕರ್ ಖಡಕ್ಕಾಗಿ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ, ಗೋವಾ ಲಿಕ್ಕರ್ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿದೆ. ಇಂತಹ ದಂಧೆಗಳಿಗೆ ಇರುವ ಶಿಕ್ಷೆಗಳ ಬಗ್ಗೆ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಬಕಾರಿ ಇಲಾಖಾ ಅಧಿಕಾರಿಗಳು ತಿಳಿಸಿದರು.

ಅರೇಸಾಮಿಕೆರೆ, ಪಟ್ಟಣದ ಪದವಿ, ಪದವಿಪೂರ್ವ ಕಾಲೇಜುಗಳ ಬಳಿ ಮದ್ಯದ ಬಾಟಲಿಗಳು ಬೀಳುತ್ತಿದೆ. ಪೊಲೀಸ್ ಗಸ್ತು ತಿರುಗಿ ಎಚ್ಚರಿಕೆ ನೀಡಿ ಎಂದು ತಾಲೂಕು ಪಂಚಾಯಿತಿ ‌ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್. ನಾಯ್ಕ ಪೊಲೀಸರಿಗೆ ಸೂಚಿಸಿದರು.