ಪ್ರಜಾಸೇವೆ ಆಂದೋಲನ ಸಭೆಯ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕು. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಿಸಬೇಕು ಎನ್ನುವುದು ಮುಖ್ಯಮಂತ್ರಿಯವರ ಆಶಯವಾಗಿದೆ.

ಭಟ್ಕಳ: ಜನರ ಬಳಿಗೆ ಬಂದು ಸಮಸ್ಯೆ ಆಲಿಸಿ ಪರಿಹಾರ ಒದಗಿಸುವುದೇ ಸರ್ಕಾರದ ಪ್ರಜಾಸೇವೆ ಆಂದೋಲನ ಸಭೆಯ ಮುಖ್ಯ ಉದ್ದೇಶವಾಗಿದೆ. ಈ ಸಭೆಯಲ್ಲಿ ಸಾರ್ವಜನಿಕರು ಅರ್ಜಿ ಕೊಟ್ಟರೆ 21 ದಿನಗಳಲ್ಲಿ ಪರಿಹಾರ ದೊರಕಲಿದೆ. ಹೀಗಾಗಿ ಸಭೆಯನ್ನು ಜನರು ಸದುಪಯೋಪಡಿಸಿಕೊಳ್ಳಬೇಕು ಎಂದು ಡೆಪ್ಯುಟಿ ಸ್ಪೀಕರ್ ಮಂಕಾಳ ಎಸ್. ವೈದ್ಯ ಹೇಳಿದರು.

ಬೆಳಕೆಯ ಬೊಮ್ಮನಕೇರಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಜಾಸೇವೆ ಆಂದೋಲನ ಸಭೆಯ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕು. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಿಸಬೇಕು ಎನ್ನುವುದು ಮುಖ್ಯಮಂತ್ರಿಯವರ ಆಶಯವಾಗಿದೆ. ರಾಜ್ಯಮಟ್ಟದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಅರ್ಜಿ ಪರಿಶೀಲಿಸುತ್ತಾರೆ. ಹೀಗಾಗಿ ಈ ಸಭೆಗೆ ಮಹತ್ವವಿದೆ. ಅಧಿಕಾರಿಗಳೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸಮಸ್ಯೆ ಬಗೆಹರಿಸಲೇಬೇಕಾಗಿದೆ ಎಂದರು.

ಜನರು ಪ್ರಜಾಸೇವೆ ಆಂದೋಲನದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬಹುದು ಎಂದ ಅವರು, ಈ ಸಲ ಮಳೆ ಕಡಿಮೆ ಆಗಿರುವುದರಿಂದ ಎಲ್ಲ ಕಡೆ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಸರ್ಕಾರ ಬರಗಾಲ ಎದುರಿಸಲು ಸನ್ನದ್ಧವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪ್ರತಿ ತಾಲೂಕಿಗೂ ಕುಡಿಯುವ ನೀರು ಮತ್ತು ಜಾನುವಾರು ಮೇವು ಮತ್ತು ಮೇವಿನ ಉತ್ಪಾದನೆಗಾಗಿ ₹1 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಸಭೆಯಲ್ಲಿ ಮೊಗೇರರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡದೇ ನೌಕರಿ, ಉನ್ನತ ಶಿಕ್ಷಣ ಮುಂತಾದವುಗಳಿಗೆ ತೊಂದರೆ ಆಗಿದೆ. ಇನ್ನಾದರೂ ಜಿಲ್ಲಾಡಳಿತ ಮೊಗೇರರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಲಾಯಿತು. ಭಟ್ಕಳ ಪುರಸಭೆ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಮಜಿ ಅವರು ನನ್ನ ತಾಯಿ ಮೃತಪಟ್ಟು ನಾಲ್ಕೈದು ವರ್ಷ ಆದರೂ ವಾರಿಸ್ಸಾ ಮಾಡಿಕೊಟ್ಟಿಲ್ಲ. ತಹಸೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಯಿತು.

ಕೇಳಿದರೆ ಕಂಪ್ಯೂಟರ್ ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ವಾರಿಸ್ಸಾ ಪ್ರಮಾಣಪತ್ರ ಯಾವಾಗ ಕೊಡುತ್ತೀರಿ ಎಂದು ಸ್ಪಷ್ಟಪಡಿಸಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು, ಅರಣ್ಯ ಭೂಮಿ ಆಗಿರುವುದರಿಂದ ವಾರಿಸ್ಸಾ ಮಾಡಲು ತೊಂದರೆ ಆಗಿದೆ. ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಸ್‌ಐಟಿಗೆ ಕಳುಹಿಸಲಾಗುವುದು. ಇದಕ್ಕೆ ಸಮಯ ತೆಗೆದುಕೊಳ್ಳುತ್ತಿದ್ದು, ತಾವು ಸಹಕರಿಸಬೇಕೆಂದರು. ಆದಷ್ಟು ಬೇಗ ವಾರಿಸ್ಸಾ ಮಾಡಿಕೊಟ್ಟರೆ ಸಾಕು ಎಂದು ಪರ್ವೇಜ್‌ ಕಾಶೀಮಜಿ ಹೇಳಿದರು.

ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಪಂ ಕಾರ್ಯನಿರ್ವಹಣಾಧಿಕಾರಿ ದಿಲೀಷ್‌ ಶಶಿ, ಡಿಎಫ್‌ಒ ಯೋಗೀಶ, ಸಹಾಯಕ ಆಯುಕ್ತ ಮಹೇಶ, ತಹಸೀಲ್ದಾರ್ ಉಷಾ ಪವಾಸ್ಕರ್, ತಾಪಂ ಇಒ ಸುನೀಲ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಸದಸ್ಯ ಜನಾರ್ದನ ದೇವಡಿಗ ಮುಂತಾದವರಿದ್ದರು. ಶಿಕ್ಷಕರ ಸುರೇಶ ಅವರು ನಿರೂಪಿಸಿದರು.