ರೈತರಿಗೆ ಮೋಸವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿ

| Published : Jul 15 2025, 11:45 PM IST

ಸಾರಾಂಶ

ರಾಮನಗರ: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ವತಿಯಿಂದ ಮಾಗಡಿ ತಾಲೂಕಿನಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ದೂರಿಗೆ ತಾಲೂಕಿನಲ್ಲಿ ರಾಗಿ ಬೆಳೆಯುವ 9,520 ರೈತರಿಗೆ ವೇ ಬ್ರಿಡ್ಜ್ ನಲ್ಲಿ ನೀಡಿದ ರಶೀದಿಯನ್ನು ಮುಂದಿನ ಸಭೆಯಲ್ಲಿ ಸಮಿತಿಗೆ ಹಾಜರುಪಡಿಸುವಂತೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಅವರಿಗೆ ಸೂಚಿಸಿದರು.

ರಾಮನಗರ: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ವತಿಯಿಂದ ಮಾಗಡಿ ತಾಲೂಕಿನಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ದೂರಿಗೆ ತಾಲೂಕಿನಲ್ಲಿ ರಾಗಿ ಬೆಳೆಯುವ 9,520 ರೈತರಿಗೆ ವೇ ಬ್ರಿಡ್ಜ್ ನಲ್ಲಿ ನೀಡಿದ ರಶೀದಿಯನ್ನು ಮುಂದಿನ ಸಭೆಯಲ್ಲಿ ಸಮಿತಿಗೆ ಹಾಜರುಪಡಿಸುವಂತೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಅವರಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಮೋಸ ಆಗದಂತೆ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳು ಎಚ್ಚರ ವಹಿಸಬೇಕು. ಉಳಿದ ತಾಲೂಕುಗಳಲ್ಲಿ ದೂರುಗಳಿಲ್ಲ ಆದರೆ ಮಾಗಡಿಯಲ್ಲಿ ಸಮಸ್ಯೆಗಳು ಏಕೆ ಉದ್ಭವಿಸಿದೆ ಎಂಬುದನ್ನು ಅಧಿಕಾರಿಗಳು ಕೂಲಂಕುಷವಾಗಿ ಸಮಿತಿಗೆ ತಿಳಿಸಬೇಕು ಎಂದರು.

ಮಾಗಡಿ ತಾಲೂಕಿನಲ್ಲಿ ಶೇ.75 ರಷ್ಟು ರಾಗಿ ಬೆಳೆಯುತ್ತಾರೆ. ಈ ಸಂಬಂಧ ತಾಲೂಕಿನಲ್ಲಿ ರಾಗಿ ಬೆಳೆಯುವ 9,520 ರೈತರು ನಿಗಮಕ್ಕೆ ಮಾರಾಟ ಮಾಡುವ ಸಂದರ್ಭದಲ್ಲಿ ನೀಡಲಾಗುವ ವೇ ಬ್ರಿಡ್ಜ್ ರಶೀದಿಯನ್ನು ಹಾಜರು ಪಡಿಸುವಂತೆ ತಾಕೀತು ಮಾಡಿದರು. ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮೋಸ ಮಾಡಲು ಬಯಸಿದರೆ ಅಗತ್ಯ ಕ್ರಮ ಜರುಗಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಗಡಿ ತಹಸೀಲ್ದಾರರ ನಡೆಯ ಕುರಿತು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ರಮೇಶ್ ಮಾತನಾಡಿ, ಈಗಾಗಲೇ ಮಾಗಡಿ ತಾಲೂಕಿನಲ್ಲಿ 1,41,562.05 ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಸರ್ಕಾರದ ಮಾರ್ಗ ಸೂಚಿಯನ್ವಯವೇ ಖರೀದಿಸಲಾಗಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 8,10,96,179 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅವರ ಪ್ರಯಾಣ ದರದ ಮೊತ್ತ 229,38,15,619 ರುಪಾಯಿಗಳಾಗಿವೆ. ಈ ಯೋಜನೆ ಮಹಿಳಾ ಪ್ರಯಾಣಿರಿಗೆ ಉತ್ತಮದ್ದಾಗಿದೆ. ಕೆಲವು ಪ್ರದೇಶಗಳಲ್ಲಿ ಬಸ್ಸುಗಳ ಅವಶ್ಯಕತೆ ಇದ್ದು, ಅಲ್ಲಿ ಬಸ್ಸುಗಳನ್ನು ಓಡಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,26,472 ಮಂದಿ ನೋಂದಾಯಿಸಿಕೊಂಡಿದ್ದು, ಪ್ರತಿ ತಿಂಗಳು 14.52 ಕೋಟಿ ರು.ಗಳನ್ನು ಭರಿಸಲಾಗುತ್ತಿದೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೂ ಒಟ್ಟಾರೆ 264.80 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 2,80,393 ಫಲಾನುಭವಿಗಳು (ಶೇ.95.24) ನೋಂದಣಿಯಾಗಿದ್ದು, ಅವರಿಗೆ ಇದುವರೆಗೂ 10,49,46,58,000 ರು.ಗಳನ್ನು ಪಾವತಿಸಲಾಗಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ 2025 ಫೆಬ್ರವರಿಯಿಂದ ನೇರ ನಗದು ವರ್ಗಾವಣೆ ಬದಲಾಗಿ ಅಕ್ಕಿ ವಿತರಣೆ ಮಾಡುವಂತೆ ಸರ್ಕಾರದ ಆದೇಶದಂತೆ 5 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ ಹಾಗೂ ಯುವನಿಧಿ ಯೋಜನೆಯಡಿಯೂ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಂಡು ಸರ್ಕಾರದ ನಿಯಮಾನುಸಾರ ಪ್ರೋತ್ಸಾಹ ಧನವನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಎಸ್.ಸಿ. ಶೇಖರ್, ಶಿವಪ್ರಸಾದ್, ರಾಮನಗರ ತಾಲೂಕು ಅಧ್ಯಕ್ಷ ವಿ.ಎಚ್. ರಾಜು, ಮಾಗಡಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಹಾರೋಹಳ್ಳಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಶೋಭಾ, ಸ್ವಾಮಿ, ಭೈರವೇಶ್, ಜಯಣ್ಣ, ಕಾಳಮ್ಮ ಮತ್ತಿತರರು ಉಪಸ್ಥಿತರಿದ್ದರು.

15ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.