ಭದ್ರಾ ಅಚ್ಚುಕಟ್ಟಿಗೆ 2 ಬೆಳೆಗೆ ಅಧಿಕಾರಿಗಳು ನೀರು ಕೊಡಲಿ : ಶಾಸಕ ಕೆ.ಎಸ್.ಬಸವಂತಪ್ಪ

| Published : Jul 22 2024, 01:27 AM IST / Updated: Jul 22 2024, 11:50 AM IST

ಸಾರಾಂಶ

ಭದ್ರಾ ಅಣೆಕಟ್ಟೆಯ ನೀರು ಯಾವುದೇ ರೀತಿ ವ್ಯರ್ಥವಾಗದಂತೆ ಸಂಗ್ರಹಿಸಿಟ್ಟುಕೊಂಡು, ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರೊದಗಿಸುವ ಕೆಲಸ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ದಾವಣಗೆರೆಯಲ್ಲಿ ಮಾಡಿದ್ದಾರೆ.

 ದಾವಣಗೆರೆ : ಭದ್ರಾ ಅಣೆಕಟ್ಟೆಯ ನೀರು ಯಾವುದೇ ರೀತಿ ವ್ಯರ್ಥವಾಗದಂತೆ ಸಂಗ್ರಹಿಸಿಟ್ಟುಕೊಂಡು, ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರೊದಗಿಸುವ ಕೆಲಸ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.

ತಾಲೂಕಿನ ಬಾಡ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಭದ್ರಾ ಅಚ್ಚುಕಟ್ಟು ರೈತರ ಸಭೆ ಉದ್ಘಾಟಿಸಿ ಮಾತನಾಡದಿ ಅವರು, ಭದ್ರಾ ಅಣೆಕಟ್ಟೆಯಲ್ಲಿ ಸಂಗ್ರಹವಾದ ನೀರು ಯಾವುದೇ ರೀತಿ ಪೋಲಾಗದಂತೆ ನೋಡಿಕೊಳ್ಳಬೇಕು. ಅಚ್ಚುಕಟ್ಟು ಪ್ರದೇಶದ ರೈತರ ಎರಡೂ ಬೆಳೆಗಳಿಗೂ ನೀರು ಕೊಡುವುದು ಅಧಿಕಾರಿಗಳ ಹೊಣೆಯಾಗಿದೆ ಎಂದರು.

ಕಳೆದ ಸಲ ಭೀಕರ ಬರದಿಂದ ರೈತರು ಭತ್ತ ಬೆಳೆಯಲಾಗಲಿಲ್ಲ. ಈ ಸಲ ಮುಂಗಾರು ಮಳೆ ಅಬ್ಬರದಿಂದ ಭದ್ರಾ ಜಲಾಶಯದಲ್ಲಿ 165 ಅಡಿ ನೀರು ಸಂಗ್ರಹವಾಗಿದೆ. ಇನ್ನೂ 20 ಅಡಿ ಬಾಕಿ ಇದೆ. ಡ್ಯಾಂನಲ್ಲಿ ನೀರು ಸಂರಕ್ಷಿಸಿ, ರೈತರ ಎರಡು ಬೆಳೆಗಳಿಗೆ ನೀರು ಕೊಡುವ ಕೆಲಸವಾಗಬೇಕು. ಭದ್ರಾ ಕಾಲುವೆಗಳಿಗೆ ಹೊಂದಿಕೊಂಡಿರುವ ಕೆರೆಗಳಿಗೆ ಮೊದಲು ನೀರು ತುಂಬಿಸಿಕೊಂಡು ನಂತರ ಭತ್ತ ನಾಟಿ ಮಾಡಲು ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಥಗಿತಗೊಂಡ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಪುನಾ ಚಾಲನೆ ನೀಡಬೇಕು. ಕಾಲುವೆ ದುರಸ್ತಿ ಮಾಡಿ ಹಂತ ಹಂತವಾಗಿ ನೀರು ಬಿಡುವಂತೆ ಭದ್ರಾ ಕಾಡಾ ಸಲಹಾ ಸಮಿತಿ ಸಭೆಯಲ್ಲಿ ಒತ್ತಾಯಿಸಿದ್ದೇವೆ. ತುಂಗಾ ಡ್ಯಾಂನಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಶಿವಮೊಗ್ಗ, ದಾವಣಗೆರೆ ಜಿಲ್ಲಾ ಸಚಿವರು ಪರಿಸರ ಇಲಾಖೆಯಿಂದ ಅಡ್ಡಿಯಾಗಿರುವ ತೊಡಕು ನಿವಾರಿಸಿ ಪುನಾ ಕಾಮಗಾರಿ ಆರಂಭಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಯೋಜನೆ ಪೂರ್ಣಗೊಂಡರೆ ಮಳೆಗಾಲದಲ್ಲಿ ತುಂಗಾ ಜಲಾಶಯದಿಂದ ಸಾವಿರಾರು ಕ್ಯುಸೆಕ್‌ ನೀರು ಪೋಲಾಗುವುದನ್ನು ಭದ್ರಾ ಜಲಾಶಯಕ್ಕೆ ತುಂಬಿಸಿದರೆ ಅಪ್ಪರ ಭದ್ರಾ ಮತ್ತು ಭದ್ರಾ ಅಚ್ಚುಕಟ್ಟು ರೈತರಿಗೆ ಸಮರ್ಪಕ ನೀರು ಪೂರೈಸಬಹುದಾಗಿದೆ. ಭದ್ರಾ ಇಂಜಿನಿಯರ್‌ಗಳು ವೈಜ್ಞಾನಿಕ ತಂತ್ರಜ್ಞಾನ ಬಳಸಿ ಭದ್ರಾ ಡ್ಯಾಂ ಗೇಟ್‌ ಸಮಸ್ಯೆ ಬಗೆಹರಿಸಬೇಕು. ಜಲಾಶಯದಿಂದ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದರು.

ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಬಲಪಡಿಸಿದಂತೆ ನೀರು ಬಳಕೆದಾರರ ಸಂಘಗಳನ್ನು ಆರ್ಥಿಕವಾಗಿ ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ಒತ್ತಡ ಹೇರುವೆ. ಜು.22ರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವ ವೇಳೆ ನೀರಾವರಿ ಸಚಿವರು, ಶಿವಮೊಗ್ಗ ಮತ್ತು ದಾವಣಗೆರೆ ಸಚಿವರೊಂದಿಗೆ ಚರ್ಚೆ ಮಾಡಿ ಕೂಡಲೇ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

ಅತ್ತಿಗೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎ.ಒ.ರವಿಕುಮಾರ, ಶರಣಪ್ಪ, ತಾಪಂ ಮಾಜಿ ಸದಸ್ಯ ಧರ್ಮಪ್ಪ, ಗ್ರಾಪಂ ಸದಸ್ಯ ರಂಗನಾಥ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ, ಸಿದ್ದೇಶ್ವರ ಕಬ್ಬೂರು, ದೇವೇಂದ್ರಪ್ಪ, ಬಾಡ ರುದ್ರಸ್ವಾಮಿ, ಮಳಲಕೆರೆ ಶುಭಾಷ್‌ಗೌಡ್ರು, ಮುರುಗೇಂದ್ರಪ್ಪ, ಕೃಷ್ಣಮೂರ್ತಿ, ಎಂ.ಡಿ.ಸುರೇಶಪ್ಪ, ಲೋಕಿಕೆರೆ ರವಿಕುಮಾರ, ಗೋಪನಾಳ ನಿಂಗರಾಜ, ಕಬ್ಬೂರು ಬಸವರಾಜಪ್ಪ, ಕಂದಗಲ್ ಕುಮಾರ , ಮಂಜುನಾಥ, ಮಳಲ್ಕೆರೆ ವೆಂಕಟೇಶ, ಹುಮ್ಮಜ್ಜ, ಅಣಬೇರು ಬುಡೇನ್ ಸಾಬ್ ಸೇರಿದಂತೆ ಅಚ್ಚುಕಟ್ಟು ರೈತರು ಸಭೆಯಲ್ಲಿ ಭಾಗವಹಿಸಿದ್ದರು 

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯು ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿದ್ದು, ಭದ್ರಾ ಕಾಲುವೆಗಳನ್ನು ವೀಕ್ಷಿಸಿ ಇಲ್ಲಿನ ನೀರು, ಕಾಲುವೆ, ಗೇಟುಗಳು, ಸೇತುವೆಗಳ ಸಮಸ್ಯೆಗಳ ಬಗ್ಗೆ ಕಳೆದ ಅಧಿವೇಶನದಲ್ಲಿ ಬೆಳಕು ಚೆಲ್ಲಿದ್ದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ 40 ಕೋಟಿ ರು. ಅನುದಾನ ಮಂಜೂರು ಮಾಡಿದ್ದಾರೆ. ನೀರಾವರಿ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಪ್ರಕ್ರಿಯೆ ಹಂತದಲ್ಲಿದ್ದು, ಅಲ್ಲಿಂದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಶೀಘ್ರವೇ ಅನುದಾನ ಬಿಡುಗಡೆ ಆಗಲಿದೆ.

ಕೆ.ಎಸ್.ಬಸವಂತಪ್ಪ,