ಸಾರಾಂಶ
ಕುಂದಗೋಳ: ಸರ್ಕಾರಿ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬರಬೇಕು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕೆಲಸ ನಿರ್ವಹಿಸಿ. ಏನಾದರೂ ಲೋಪದೋಷ ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಕರುಣೇಶಗೌಡ ಜಮ್ಮನಗೌಡ್ರ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಧಾರವಾಡ ವತಿಯಿಂದ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸದ್ಯ ಬೇಸಿಗೆ ಇರುವುದಿಂದ ಅಧಿಕಾರಿಗಳು ಎಲ್ಲ ಗ್ರಾಮ, ಪಟ್ಟಣಗಳಲ್ಲಿ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಕೃಷಿ ಇಲಾಖೆಯಲ್ಲಿ ಆರ್‌ಟಿಐ ಅಡಿ 6 ಅರ್ಜಿಗಳು ಸ್ವೀಕೃತವಾಗಿವೆ. ಸಕಾಲದಲ್ಲಿ ಯಾವ ಅರ್ಜಿ ಬಂದಿರುವುದಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಬಳಿತ ಮಾತನಾಡಿದ ಲೋಕಾಯುಕ್ತ ಅಧಿಕಾರಿ, ನಿಮ್ಮ ಇಲಾಖೆಯಿಂದ ಕೊಡಮಾಡುವ ಗೊಬ್ಬರ ಬೀಜಕ್ಕೆ ರಸೀದಿ ನೀಡುವುದಿಲ್ಲ ಹಾಗೂ ಮಾಹಿತಿ ಫಲಕಗಳಲ್ಲಿ ದರಗಳ ಮಾಹಿತಿ ಹಾಕುತ್ತಿಲ್ಲ ಎಂಬ ಆರೋಪ ಬಂದಿದ್ದು, ಇದನ್ನು ಸರಿಪಡಿಸುವಂತೆ ಸೂಚಿಸಿದರು.
ಈರಪ್ಪ ನಾಗಣ್ಣವರ ಹಾಗೂ ಸಂಗಡಿಗರು ಲೋಕಾಯುಕ್ತ ಅಧಿಕಾರಿಗಳಿಗೆ ಕುಂದಗೋಳದಿಂದ ಶಿರೂರ ರಸ್ತೆ ಹಲವಾರು ಬಾರಿ ಮೊರಂ ಹಾಕಿ ಪದೇ ಪದೇ ಬಿಲ್ ತೆಗೆಯಲಾಗಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆಗೆ ಹಾಕಿರುವ ಹೈ ಮಾಸ್ಕ್ ಲೈಟ್‌ಗಳು ಕಳಪೆಯಾಗಿದ್ದು, ಇದರಲ್ಲಿ ಅವ್ಯವಹಾರವಾಗಿದೆ. ಇದನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.ಲೋಕಾಯುಕ್ತ ಡಿವೈಎಸ್‌ಪಿ ರವೀಂದ್ರ ಕುರಬಗಟ್ಟಿ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಮುಂದಿನ ಸಭೆಗೆ ಬರುವಾಗ ಎಲ್ಲ ಮಾಹಿತಿಗಳನ್ನು ಸರಿಯಾಗಿ ತೆಗೆದುಕೊಂಡು ಬರಬೇಕು ಎಂದು ತಾಕೀತು ಮಾಡಿದರು. ನಂತರ ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ್ ಕಮ್ಮಾರ, ಸಿಪಿಐ ಶಿವಾನಂದ ಅಂಬಿಗೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.