ಅಧಿಕಾರಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸಲಿ: ಶಾಸಕ ಮಾನೆ ಸೂಚನೆ

| Published : Mar 01 2025, 01:01 AM IST

ಅಧಿಕಾರಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸಲಿ: ಶಾಸಕ ಮಾನೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್ ಗ್ರಿಡ್‌ಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ನಡೆದಿರುವ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿ ಆದಷ್ಟು ಬೇಗ ಪೂರ್ಣಗೊಳಿಸಲು ಗಮನ ಹರಿಸಿ ಎಂದು ಶಾಸಕ ಮಾನೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹಾನಗಲ್ಲ: ಬೆಳೆ ಉಳಿಸಿಕೊಳ್ಳಬೇಕು ಎನ್ನುವ ಧಾವಂತದಲ್ಲಿ ರೈತ ಸಮೂಹವಿದೆ. ರೈತರು ಫೋನ್ ಮಾಡಿದಾಗ ರಿಸೀವ್ ಮಾಡಿ. ವಸ್ತುಸ್ಥಿತಿ ತಿಳಿಸಿ, ವಾಸ್ತವದ ಬಗ್ಗೆ ಮನವರಿಕೆ ಮಾಡಿಕೊಡಿ. ವಿನಾಕಾರಣ ಅವರನ್ನು ಕೆರಳಿಸುವ ಕೆಲಸ ಮಾಡಬೇಡಿ. ಸೌಜನ್ಯದಿಂದ ವರ್ತಿಸಿ ಸಹಕಾರ ಪಡೆದುಕೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಹೆಸ್ಕಾಂ ಎಇಇ ಆನಂದ ಅವರಿಗೆ ಸೂಚಿಸಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಮುಂದುವರಿದ ಸಭೆಯಲ್ಲಿ ಮಾತನಾಡಿದರು.

ಬೇಸಿಗೆಗೆ ಮೊದಲೇ ಬಿಸಿಲಿನ ತಾಪ ಹೆಚ್ಚಿದೆ. ಸಹಜವಾಗಿ ಬೆಳೆಗಳಿಗೆ ನೀರಿನ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೇ ಬೆಳೆಗಳಿಗೆ ನೀರು ಹಾಯಿಸುವತ್ತ ರೈತರು ಚಿತ್ತ ಹರಿಸಿದ್ದಾರೆ. ವಿದ್ಯುತ್ ಸರಬರಾಜು, ಟಿಸಿ ಕುರಿತು ಮಾಹಿತಿ ಪಡೆದುಕೊಳ್ಳಲು ರೈತರು ಫೋನ್ ಮಾಡಿದಾಗ ರಿಸೀವ್ ಮಾಡಿ ಮಾತನಾಡಿ, ವಿದ್ಯುತ್ ಸರಬರಾಜು ಸಮಯದ ಕುರಿತು ಮೊದಲೇ ಮಾಹಿತಿ ನೀಡಿ. ಸುಟ್ಟಿರುವ ಟಿಸಿ ಬದಲಾವಣೆ ಯಾವಾಗ ಆಗಲಿದೆ ಎನ್ನುವ ಸ್ಪಷ್ಟ ಮಾಹಿತಿ ಕೊಡಿ ಎಂದು ಸೂಚಿಸಿದ ಶ್ರೀನಿವಾಸ ಮಾನೆ, 7 ಗಂಟೆ ಸರಬರಾಜು ಮಾಡಲು ಸರ್ಕಾರದ ಬಳಿ ವಿದ್ಯುತ್ ಅಭಾವವಿಲ್ಲ. ಆದರೆ ಗ್ರಿಡ್‌ಗಳು, ಲೈನ್‌ಗಳಲ್ಲಿ ಸಾಮರ್ಥ್ಯವಿಲ್ಲ. ಹಾಗಾಗಿ ಗ್ರಿಡ್, ಟಿಸಿಗಳ ಸಾಮರ್ಥ್ಯ ಹೆಚ್ಚಿಸಲು ಗಮನ ನೀಡಲಾಗಿದೆ. ಈ ಸಮಸ್ಯೆ ಇಂದು, ನಿನ್ನೆಯದಲ್ಲ. ಬದಲಿಗೆ ಹತ್ತಾರು ವರ್ಷಗಳದ್ದಾಗಿದೆ. ಗ್ರಿಡ್‌ಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ನಡೆದಿರುವ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿ ಆದಷ್ಟು ಬೇಗ ಪೂರ್ಣಗೊಳಿಸಲು ಗಮನ ಹರಿಸಿ ಎಂದು ಶಾಸಕ ಮಾನೆ ಸೂಚಿಸಿದರು.ಅಸಮರ್ಥ ಲೈನ್‌ಮನ್: ಅಸಮರ್ಥ ಲೈನ್‌ಮನ್‌ರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕಿ. ಅದಕ್ಕಾಗಿಯೇ ಹೊಸ ಕಾನೂನು ರೂಪಿಸುವ ಅಗತ್ಯವಿದೆ. ತಾವು ವಿದ್ಯುತ್ ಕಂಬ ಹತ್ತಲಾಗದ್ದಕ್ಕೆ ಅನನುಭವಿಗಳನ್ನು ಕಂಬ ಹತ್ತಿಸಿ ಪ್ರಾಣ ತೆಗೆಯುತ್ತಿದ್ದಾರೆ. ಇಂಥ ಲೈನಮನ್‌ರ ಅಗತ್ಯ ನಮಗಿಲ್ಲ. ಇಂಥವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡಿ ಎಂದು ತಾಪಂ ನಾಮನಿರ್ದೇಶತ ಸದಸ್ಯರು ಒತ್ತಾಯಿಸಿದರು.ಬೇಸಿಕ್ ವರ್ಕರ್ ಕೊರತೆ: ಕೃಷಿ ಹಂಗಾಮಿನ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರಗಳಷ್ಟೇ ಅಲ್ಲದೇ ಉಪ ಕೇಂದ್ರಗಳನ್ನು ತಾತ್ಕಾಲಿಕವಾಗಿ ಆರಂಭಿಸಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಬೇಕು. ಕೃಷಿ ಇಲಾಖೆಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗಾರಗಟ್ಟಿ ಅವರಿಗೆ ಶಾಸಕ ಮಾನೆ ಸೂಚಿಸಿದರು. ಆದರೆ ತಾಲೂಕಿನ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ಬೇಸಿಕ್ ವರ್ಕರ್ ಕೊರತೆ ಇದೆ ಎಂದು ಕೃಷಿ ಅಧಿಕಾರಿ ಮಾರುತಿ ಅಂಗರಗಟ್ಟಿ ಅಳಲು ತೋಡಿಕೊಂಡರು.

ಕೃಷಿ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ನೀಡುವ ಬೀಜ ಕೃಷಿ ಸಾಮಗ್ರಿ ವಿತರಣೆಯಲ್ಲಿ ಮೋಸ ಮಾಡುತ್ತಿದ್ದೀರಿ. ಕೃಷಿ ಸೌಲಭ್ಯಗಳ ಮಾಹಿತಿ ಜನರಿಗೆ ನೀಡುತ್ತಿಲ್ಲ. ನೀವು ವಿತರಿಸುವ ಸ್ಪಿಂಕ್ಲರ್, ಹನಿ ನೀರಾವರಿ, ತಾಡಪತ್ರಿಗಳು ಗುಣಮಣ್ಣದವುಗಳಿಲ್ಲ. ಕೃಷಿ ಮಾರಾಟ ಕೇಂದ್ರಗಳಲ್ಲಿ ಬೆಲೆ ಸೂಚಕೆ ಹಾಕದಿದ್ದರೂ ಸುಮ್ಮನಿದ್ದೀರಿ ಎಂದು ಕೃಷಿ ಅಧಿಕಾರಿ ವಿರುದ್ಧ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಕುಮಾರ ದೊಡ್ಡಮನಿ ಹರಿಹಾಯ್ದರು.ಬಮ್ಮನಹಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲ್ಲುವುದು ಮಾತ್ರವಲ್ಲ, ಬಸ್‌ಗಳಿಗೆ ನಿಲ್ಲಲು ಅವಕಾಶ ನೀಡುತ್ತಿಲ್ಲ. ಅಲ್ಲಿನ ಶೌಚಾಲಯ ಅವ್ಯವಸ್ಥೆ ನಾಚಿಕೆ ತರುತ್ತಿದೆ. ಹಳೆ ಬಸ್ ನಿಲ್ದಾಣದ ದುರುಪಯೋಗವಾಗುತ್ತಿದೆ ಎಂದು ಸದಸ್ಯರು ದೂರಿದರು. ಕೃಷಿ ಸಖಿಯರು ಹಾಗೂ ಪಶು ಸಖಿಯರ ಆಯ್ಕೆಯಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಇವರ ಕೆಲಸದ ನಿರ್ವಹಣೆ ಸಮರ್ಪಕವಿಲ್ಲ ಎಂದು ಕೂಡ ದೂರಿದರು.

ತಹಸೀಲ್ದಾರ್ ರೇಣುಕಾ ಎಸ್., ತಾಪಂ ಇಒ ಪರಶುರಾಮ ಪೂಜಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯರಾದ ರಾಜೂ ಜೋಗಪ್ಪನವರ, ಮಹ್ಮದ್‌ಹನೀಫ್ ಬಂಕಾಪೂರ, ಪ್ರಕಾಶ ಈಳಿಗೇರ, ಅನಿತಾ ಡಿಸೋಜಾ, ಮಾರ್ಕಂಡಪ್ಪ ಮಣ್ಣಮ್ಮನವರ ಇದ್ದರು.