ಬೆಣ್ಣಿಹಳ್ಳಿ ಗ್ರಾಪಂ ವ್ಯಾಪ್ತಿಯ ಲೋಲೇಶ್ವರ, ನಜೀರ್ ನಗರ, ತೊಗರಿಕಟ್ಟಿ ಗ್ರಾಪಂ ವ್ಯಾಪ್ತಿಯ ಗೋವೇರಹಳ್ಳಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿದ್ದವು.
ಹರಪನಹಳ್ಳಿ: ಗ್ರಾಪಂ ಮಟ್ಟದಲ್ಲಿ ಜನಸಾಮಾನ್ಯರ ಕೆಲಸಗಳು ವಿಳಂಬವಾಗುತ್ತಿರುವುದು ಸರಿಯಲ್ಲ. ಬೇಸಿಗೆಯಲ್ಲಿ ನೀರು, ಸ್ವಚ್ಛತೆ ತುರ್ತು ಅಗತ್ಯಗಳಾಗಿದ್ದು, ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ವಿಜಯನಗರ ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಹೇಳಿದ್ದಾರೆ.ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಕುರಿತು ದೂರುಗಳು ಹಿನ್ನೆಲೆಯಲ್ಲಿ ಮತ್ತು ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನೀರಿನ ಸಮಸ್ಯೆಯಾಗದಂತೆ ರೈತರ ಬೋರ್‌ವೆಲ್‌ಗಳ ನೆರವು ಪಡೆಯಿರಿ ಎಂದು ಅವರು ತಿಳಿಸಿದರು. ಬೆಣ್ಣಿಹಳ್ಳಿ ಗ್ರಾಪಂ ವ್ಯಾಪ್ತಿಯ ಲೋಲೇಶ್ವರ, ನಜೀರ್ ನಗರ, ತೊಗರಿಕಟ್ಟಿ ಗ್ರಾಪಂ ವ್ಯಾಪ್ತಿಯ ಗೋವೇರಹಳ್ಳಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿದ್ದವು. ಸಿಇಒ ಅವರು ಈ ಸಮಸ್ಯೆ ಪೀಡಿತ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ನೀರಿನ ಮೂಲಗಳನ್ನು ಪರಿಶೀಲಿಸಿದರು. ಜನರಿಗೆ ಕುಡಿಯುವ ನೀರು ಹಾಗೂ ನಿತ್ಯ ಬಳಕೆಯ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ವಿಜಯನಗರದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಾ ಹಾಗೂ ಹರಪನಹಳ್ಳಿಯ ಎಇಇ ಮಂಜ್ಯಾನಾಯ್ಕ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.ತಾಪಂ ಅನಿರ್ಬಂಧಿತ ಯೋಜನೆಯಡಿ ಬೆಣ್ಣಿಹಳ್ಳಿ ಗ್ರಾಪಂ ವ್ಯಾಪ್ತಿಯ ಎಂ.ಪಿ. ಪ್ರಕಾಶ ನಗರ, ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಯ ದೇವರತಿಮ್ಮಲಾಪುರ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.
ರೈತರ ಸಭೆ:ಹಾರಕನಾಳು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಲೋಪವಾಗಿ ಅರ್ಹ ರೈತರಿಗೆ ಬೆಳೆ ವಿಮೆ ದೊರೆತಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರೈತರ ಮನವಿ ಮೇರೆಗೆ ಹಾರಕನಾಳು ಗ್ರಾಪಂ ಕಚೇರಿಗೆ ಸಿಇಒ ಭೇಟಿ ನೀಡಿದ ಹಿನ್ನೆಲೆಯಲ್ಲಿ ರೈತರು ಧಾವಿಸಿ ಅಹವಾಲು ಸಲ್ಲಿಸಿದರು. ಈಗಾಗಲೇ ಹರಪನಹಳ್ಳಿ ಕೃಷಿ ಇಲಾಖೆಯಲ್ಲಿ ಸಭೆ ನಡೆದಿದ್ದು, ಇಒ ಹಾಗೂ ತಹಸೀಲ್ದಾರ್ ಸೇರಿ ವರದಿ ನೀಡಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅರ್ಹ ರೈತರಿಗೆ ಮುಂದೆ ಈ ರೀತಿ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಚಂದ್ರಶೇಖರ್ ವೈ.ಎಚ್., ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್., ಪಿಆರ್‌ಇಡಿ ಎಇಇ ಕುಬೇಂದ್ರ ನಾಯ್ಕ, ಜೆಇ ಸುಭಾಶ್ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಪಿಡಿಒಗಳಾದ ಸಿ.ಹುಲಿಗೆಮ್ಮ, ರುಬಿನಾ ದೊಡ್ಡಮನಿ, ಶಿವಪ್ಪ, ಶಾಂತಪ್ಪ ಎಚ್. ಇದ್ದರು.ಹರಪನಹಳ್ಳಿ ತಾಲೂಕು ಮಾತ್ರವಲ್ಲದೇ ವಿಜಯನಗರ ಜಿಲ್ಲೆಯಲ್ಲಿ ಎಲ್ಲೇ ನೀರಿನ ಸಮಸ್ಯೆ ಉದ್ಭವಿಸಿದರೆ ಅದಕ್ಕೆ ಆರ್‌ಡಬ್ಲುಎಸ್ ಎಂಜಿನಿಯರ್, ಪಿಡಿಒಗಳೇ ನೇರ ಹೊಣೆ. ಮುಂಜಾಗ್ರತಾ ಕ್ರಮವಾಗಿ ಬೇಸಿಗೆ ಶುರುವಾಗವ ಮುನ್ನವೇ ಅಥವಾ ಪ್ರತೀ ವರ್ಷ ಕ್ರಿಯಾಯೋಜನೆ ಮಾಡುವಾಗ ಎಲ್ಲೆಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ ಅಂತ ಮಾಹಿತಿ ಪಡೆದು ಯೋಜನೆ ತಯಾರಿಸುವುದು ಈ ಸಿಬ್ಬಂದಿ ಜವಾಬ್ದಾರಿ. ಮತ್ತೊಮ್ಮೆ ದೂರುಗಳು ಕೇಳಿ ಬಂದರೆ ನೇರವಾಗಿ ಕಠಿಣ ಕ್ರಮಕ್ಕೆ ಆದೇಶ ಮಾಡಲಾಗುವುದು ಎನ್ನುತ್ತಾರೆ ವಿಜಯನಗರ ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ.