ಅರ್ಹರಿಗೆ ಯೋಜನೆ ತಲುಪಿಸಲು ಅಧಿಕಾರಿಗಳು ಶ್ರಮಿಸಿ: ಶಾಸಕ ಅಶೋಕ ಪಟ್ಟಣ

| Published : Mar 04 2025, 12:34 AM IST

ಸಾರಾಂಶ

ಕೇವಲ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಿದರೆ ಜನರಿಗೆ ತಲುಪಲು ಸಾಧ್ಯವಿಲ್ಲ ಮತ್ತು ನಿಜವಾಗಿ ಪ್ರಯೋಜನ ಪಡೆಯಬೇಕಾದವರು ಯೋಜನೆಯಿಂದ ಹೊರಗುಳಿಯುತ್ತಾರೆ

ಕನ್ನಡಪ್ರಭ ವಾರ್ತೆ ರಾಮದುರ್ಗ

ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪಲು ಅಧಿಕಾರಿಗಳು ಯೋಜನೆಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಾನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುದಾನ ನೀಡಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಿದಾಗ ಕೇವಲ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಿದರೆ ಜನರಿಗೆ ತಲುಪಲು ಸಾಧ್ಯವಿಲ್ಲ ಮತ್ತು ನಿಜವಾಗಿ ಪ್ರಯೋಜನ ಪಡೆಯಬೇಕಾದವರು ಯೋಜನೆಯಿಂದ ಹೊರಗುಳಿಯುತ್ತಾರೆ ಎಂದು ತಿಳಿಸಿದರು.

ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ವೈದ್ಯರು ಹಣದ ಬೆನ್ನು ಹತ್ತದೆ ಮಾನವೀಯತೆ ಅರಿತು ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು ಸರ್ಕಾರಿ ವೈದ್ಯರ ಮೇಲೆ ಹಣವಿಲ್ಲದೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂದು ಆರೋಪವಿದೆ. ಈ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ನವೀನ ನಿಜಗುಲಿ ಅವರಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.

ತಾಲೂಕಿನ 137 ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗೀತ್ವದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಕಾಮಗಾರಿ ಕೈಗೊಂಡಿದ್ದು ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ. ಕೆಲವು ಗ್ರಾಮಗಳಲ್ಲಿ ತಾಂತ್ರಿಕ ಮತ್ತು ಗುತ್ತಿಗೆದಾರರ ವಿಳಂಬದಿಂದ ಬಾಕಿ ಉಳಿದಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಎಇ ಶ್ರೀನಿವಾಸ ವಿಶ್ವಕರ್ಮ ಸಭೆಗೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಸಭೆಗೆ ಮಾಹಿತಿ ನೀಡಿ, ಈ ಭಾರಿ ಕೂಡಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವೆಬ್‌ಕಾಸ್ಟಿಂಗ್ ಮೂಲಕ ನಡೆಸಲಾಗುತ್ತಿದೆ ಮತ್ತು ಫಲಿತಾಂಶ ಸುಧಾರಣೆಗಾಗಿ ಮತ್ತು ಪರೀಕ್ಷಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು 9 ವಿಶೇಷ ಕಾರ್ಯಕ್ರಮ ಮಾಡುವುದು. ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳ ಮನೆಗೆ ತೆರಳಿ ಶಿಕ್ಷಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅನುಮತಿ ಪಡೆಯದೇ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಮತ್ತು ಹೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳಿಗೆ ಅನಧಿಕೃತ ಬ್ಯಾನರ್ ಮತ್ತು ಬಂಟಿಂಗ್ಸ್‌ ಅಳವಡಿಸುತ್ತಿದ್ದು ಇದರಿಂದ ಪುರಸಭೆ ಆದಾಯ ಕಡಿಮೆಯಾಗುತ್ತಿದ್ದು ಕಟ್ಟು ನಿಟ್ಟಾಗಿ ಅನುಮತಿ ಪಡೆದವರಿಗೆ ಮಾತ್ರ ಅವಕಾಶ ನೀಡಬೇಕು ಜೊತೆಗೆ ಪುರಸಭೆಯ ಅನುಮತಿ ಪಡೆದ ಬಗ್ಗೆ ಬ್ಯಾನರದಲ್ಲಿ ಕಾಣುವಂತೆ ಪ್ರಕಟಿಸಲು ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿ ಈರಣ್ಣ ಗುಡದದಾರಿ ಅವರಿಗೆ ಶಾಸಕ ಅಶೋಕ ಪಟ್ಟಣ ಸೂಚನೆ ನೀಡಿದರು.

ನಾಗನೂರ, ಕೆ.ಚಂದರಗಿ, ರೇವಡಿಕೊಪ್ಪ, ಆತ್ಮಾನಂದನಗರ, ಗುದಗೊಪ್ಪ, ಸುರೇಬಾನ, ದಾ.ಸಾಲಾಪೂರ, ವೆಂಕಟಾಪೂರ, ತೋಟಗಟ್ಟಿ, ಸಿದ್ನಾಳ ಗ್ರಾಮಗಳು ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುಬಹುದಾದ 10 ಗ್ರಾಮಗಳಾಗಿವೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ಲೋಕೊಪಯೋಗಿ, ಸಮಾಜ ಕಲ್ಯಾಣ, ಅರಣ್ಯ, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ತಾಪಂ ಇಓ ಬಸವರಾಜ ಐನಾಪೂರ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಸೇರಿದಂತೆ ತಾಲೂಕುಅಧಿಕಾರಿಗಳು ಇದ್ದರು.