ಜಿಎಸ್ಟಿ ನುಂಗಿ ನೀರು ಕುಡಿಯುವ ಅಧಿಕಾರಿಗಳು

| Published : Oct 31 2025, 02:45 AM IST

ಸಾರಾಂಶ

ಯಾವ್ಯಾವ ಇಲಾಖೆಯಲ್ಲಿ ವಂಚನೆಯಾಗುತ್ತಿದೆ ಎನ್ನುವ ತನಿಖೆಯಾಗಲಿ

ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೇ ಸರ್ಕಾರದ ಬೊಕ್ಕಸ ಸೇರಬೇಕಾದ ಜಿಎಸ್ಟಿ ಮತ್ತು ಸೆಸ್ ನ್ನು ಸ್ಥಳೀಯವಾಗಿ ಅಧಿಕಾರಿಗಳು ದೋಚುತ್ತಿದ್ದಾರೆ. ಬೋಗಸ್ ಬಿಲ್, ಅಕ್ರಮಕ್ಕೆ ಜಿಎಸ್ಟಿ ಹಣ ಬಳಕೆ ಮಾಡಿಕೊಳ್ಳುತ್ತಿರುವ ದಂಧೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೆಆರ್ ಐಡಿಎಲ್ ನಲ್ಲಿ ಕೋಟಿ ಕೋಟಿ ಲೂಟಿ ಹೊಡೆದ ಪ್ರಕರಣ ಬೆಳಕಿಗೆ ಬಂದಾಗಲೂ ಸರ್ಕಾರದ ಖಜಾನೆ ಸೇರಬೇಕಾದ ಜಿಎಸ್ಟಿಯನ್ನು ಅಧಿಕಾರಿಗಳು ಸ್ಥಳೀಯವಾಗಿಯೇ ಎತ್ತಿ ನುಂಗಿ ನೀರು ಕುಡಿದಿರುವ ಅಂಶ ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿತ್ತು.

ಈಗ ಕೊಪ್ಪಳ ನಗರಸಭೆಯಲ್ಲಿಯೂ ನಡೆದಿರುವ ಅಕ್ರಮ ಲೋಕಾಯುಕ್ತ ಅಧಿಕಾರಿಗಳೇ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಉಪಲೋಕಾಯುಕ್ತ ಬಿ. ವೀರಪ್ಪ ಕೊಪ್ಪಳ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವಾಗ ಸರ್ಕಾರಕ್ಕೆ ಪಾವತಿಸಬೇಕಾದ ಸೆಸ್ ಮತ್ತು ಜಿಎಸ್ಟಿಯ ಮಾಹಿತಿ ಕೇಳಿದಾಗ ಇದು ಬೆಳಕಿಗೆ ಬಂದಿದೆ. ಖುದ್ದು ಕೊಪ್ಪಳ ನಗರಸಭೆಯ ಲೆಕ್ಕಾಧಿಕಾರಿ ಮಂಜುನಾಥ ಅವರೇ ಕೊಪ್ಪಳ ನಗರಸಭೆಯಲ್ಲಿ ಸೆಸ್ ಮತ್ತು ಜಿಎಸ್ಟಿ ಸೇರಿ ಬರೋಬ್ಬರಿ ₹17 ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ. ಸರ್ಕಾರಕ್ಕೆ ಪಾವತಿ ಮಾಡಿಲ್ಲ ಎಂದು ಹೇಳಿದ್ದಾರೆ. ಪಕ್ಕದಲ್ಲಿಯೇ ಇದ್ದ ಪೌರಾಯುಕ್ತ ವೆಂಕನಗೌಡ ನಾಗನೂರು ಅವರು ನಾನು ಬರುವ ಮುನ್ನವೇ ಇದೆಲ್ಲ ಆಗಿದೆ ಎಂದಿದ್ದಾರೆ. ಈ ಮೂಲಕ ಅಕ್ರಮದಲ್ಲಿ ಜಿಎಸ್ಟಿ ನುಂಗಿ ನೀರು ಕುಡಿದಿರುವುದು ಪಕ್ಕಾ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ದೊಡ್ಡ ದಂಧೆ : ಜಿಎಸ್ಟಿ ನುಂಗುವ ದೊಡ್ಡ ದಂಧೆಯೇ ಬೇರೂರಿದೆ ಎನ್ನಲಾಗುತ್ತಿದೆ. ಕೆಆರ್ ಐಡಿಎಲ್ ಇಲಾಖೆ, ಜಿಪಂ ಇಂಜನಿಯರಿಂಗ್, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇದು ದೊಡ್ಡ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಈ ಕುರಿತು ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ತನಿಖೆಯಾಗಬೇಕು ಎನ್ನುವುದು ಹಿರಿಯ ಅಧಿಕಾರಿಗಳ ಅನಿಸಿಕೆಯಾಗಿದೆ.

ಜಿಎಸ್ಟಿ ಮತ್ತು ಸೆಸ್ ನ್ನು ಸ್ಥಳೀಯವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಅದನ್ನು ನೇರವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕು. ಇಲಾಖೆಯ ಖಾತೆಗೆ ಜಮೆಯಾದ ಬಳಿಕ ಅದನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು. ಆದರೆ, ಬಹುತೇಕ ಇಲಾಖೆಯಲ್ಲಿ ಸರ್ಕಾರಕ್ಕೆ ಪಾವತಿ ಮಾಡುವುದೇ ಇಲ್ಲ. ಅದನ್ನು ಅಲ್ಲಿಯ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಬಳಕೆ ಮಾಡಿಕೊಳ್ಳುತ್ತಾರೆ. ಇದೆಲ್ಲಕ್ಕೂ ಬೋಗಸ್ ಬಿಲ್ ಸೃಷ್ಟಿ ಮಾಡುತ್ತಾರೆ.

ಸರ್ಕಾರದಿಂದ ಬಂದಿರುವ ಅನುದಾನಕ್ಕೆ ಲೆಕ್ಕಪತ್ರ ಇಡುತ್ತಾರೆ. ಆದರೆ, ಜಿಎಸ್ಟಿ ಜಮೆಯಾಗಿದ್ದನ್ನು ಸರಿಯಾಗಿ ತೋರಿಸುವುದೇ ಇಲ್ಲ. ಜಮೆಯಾಗುತ್ತಿದ್ದಂತೆ ಅದಕ್ಕೊಂದು ಸ್ಥಳೀಯವಾಗಿಯೇ ಯೋಜನೆ ರೂಪಿಸಿಕೊಂಡು ವೆಚ್ಚ ಮಾಡಿದ ಲೆಕ್ಕ ತೋರಿಸಲಾಗುತ್ತದೆ. ವಾಸ್ತವದಲ್ಲಿ ಅಲ್ಲಿ ಯಾವುದೇ ಖರ್ಚು ಸಹ ಆಗಿರುವುದಿಲ್ಲ.

ಕೊಪ್ಪಳ ನಗರಸಭೆಯೊಂದರಲ್ಲಿಯೇ ಬರೋಬ್ಬರಿ ₹17 ಕೋಟಿ ರುಪಾಯಿ ಜಿಎಸ್ಟಿ ಹೀಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಉಪಲೋಕಾಯುಕ್ತರ ಎದುರಿಗೆ ಇದನ್ನು ಹೇಳಲಾಗಿದೆ.

ರಾಜ್ಯಾದ್ಯಂತ ದಂಧೆ: ಜಿಎಸ್ಟಿಯನ್ನು ಸ್ಥಳೀಯವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡುವ ದಂಧೆ ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಇಲ್ಲ. ರಾಜ್ಯಾದ್ಯಂತ ಇದ್ದು, ಇದರ ಸಮಗ್ರ ತನಿಖೆಯಾಗಬೇಕಾಗಿದೆ. ಅಷ್ಟೇ ಅಲ್ಲ, ಖಾಸಗಿಯಾಗಿಯೂ ಗುತ್ತಿಗೆದಾರರು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿರುವ ಜಿಎಸ್ ಟಿಯಲ್ಲಿ ದೊಡ್ಡ ವಂಚನೆ ಮಾಡಲಾಗುತ್ತದೆ ಎನ್ನಲಾಗುತ್ತದೆ. ನಕಲಿ ಜಿಎಸ್ ಟಿ ಪಾವತಿ ಬಿಲ್ ಲಗತ್ತಿಸಿ ಇಲಾಖೆಯ ಗುತ್ತಿಗೆಯಲ್ಲಿ ಪಾವತಿ ಮಾಡಬೇಕಾಗಿರುವ ಜಿಎಸ್ ಟಿಯನ್ನು ತಮ್ಮ ಖಾತೆಗೆ ಸೆಳೆದಿದ್ದಾರೆ ಎನ್ನುವುದು ತನಿಖೆಯಾಗಬೇಕು ಎನ್ನುತ್ತಾರೆ ಹೆಸರು ಹೇಳದ ಅಧಿಕಾರಿಯೋರ್ವರು.

ಕಾನೂನು ಪ್ರಕಾರ ಅಪರಾಧ

ಜಿಎಸ್‌ಟಿ ಕಾಯ್ದೆ 2017 ರ ಸೆಕ್ಸನ್ 76 ಪ್ರಕಾರ ಯಾವುದೇ ವ್ಯಕ್ತಿ ಅಥವಾ ಇಲಾಖೆ ಜನರ ಜಿಎಸ್ಟಿಯಿಂದ ಸಂಗ್ರಹಿಸಿದ ಹಣವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕು. ಸ್ಥಳೀಯವಾಗಿ ಬಳಸಿಕೊಳ್ಳಲು ಅವಕಾಶ ಇಲ್ಲ. ಹಾಗೇನಾದರೂ ಆದರೆ ದಂಡಾರ್ಹ ಶಿಕ್ಷೆಯಾಗಿದೆ.

ಜಿಎಸ್ಟಿ ಸ್ಥಳೀಯವಾಗಿ ಬಳಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೇನಾದರೂ ಬಳಿಸಿಕೊಂಡರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಶೇ. 100 ರಷ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಖಾಸಗಿ ಲೆಕ್ಕಪರಿಶೋಧಕ ಚಂದ್ರಕಾಂತ ತಾಲೆಡ ತಿಳಿಸಿದ್ದಾರೆ.