ಕೂಡ್ಲಿಗಿಯ ದೇವಲಾಪುರ ಕೆರೆ ಒತ್ತುವರಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

| Published : Aug 23 2024, 01:04 AM IST

ಕೂಡ್ಲಿಗಿಯ ದೇವಲಾಪುರ ಕೆರೆ ಒತ್ತುವರಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆಯ ಪಕ್ಕದಲ್ಲಿ ವಿಜಯನಗರ ಕಾಲದ ದೇವಲಾಪುರ ಎನ್ನುವ ಗ್ರಾಮವಿದೆ. ಇಂದು ಇದು ಪಾಳು ಗ್ರಾಮವಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಇಲ್ಲಿನ ಗಜಾಪುರ ಕಂದಾಯ ವ್ಯಾಪ್ತಿಗೆ ಸೇರಿದ ಐತಿಹಾಸಿಕ ದೇವಲಾಪುರ ಕೆರೆ ಬಹುತೇಕ ತುಂಬಿದೆ. ಕೆರೆಯ ಅಂಗಳದಲ್ಲಿ ಕೆಲವು ರೈತರು ಒತ್ತುವರಿ ಮಾಡಿಕೊಂಡು ಹತ್ತಾರು ಕೊಳವೆಬಾವಿ ಕೊರೆಸಿ ಕೆರೆಯನ್ನೇ ಜಮೀನು ಮಾಡಿಕೊಂಡಿರುವ ಆಘಾತಕಾರಿ ವಿಷಯ ಪತ್ತೆಯಾಗಿದೆ.

ಕೆಲವು ಹಿತಾಸಕ್ತಿಗಳು ಅತಿಕ್ರಮಣ ಮಾಡುವುದರ ಮೂಲಕ ಕೆರೆಯನ್ನೇ ನುಂಗುತ್ತಿದ್ದಾರೆ. ತಾಲೂಕಿನ ಅತ್ಯಂತ ದೊಡ್ಡ ಕೆರೆಯಾಗಿರುವ ದೇವಲಾಪುರ ಕೆರೆಯನ್ನು ಅಧಿಕಾರಿಗಳು ನಿರ್ಲಕ್ಷಿಸಿರುವುದು ಸಲ್ಲದು. 56.94 ಎಂಸಿಎಫ್‌ಟಿ ನೀರಿನ ಸಾಮರ್ಥ್ಯವಿರುವ ಈ ಕೆರೆಯ ಒಟ್ಟು ವಿಸ್ತೀರ್ಣ 118 ಹೆಕ್ಟೇರ್ ಪ್ರದೇಶ. ಆದರೆ ಇಂದು ಈ ಕೆರೆ ಅತಿಕ್ರಮಣಕ್ಕೆ ತುತ್ತಾಗಿದೆ.

ಕೆರೆಯ ಪಕ್ಕದಲ್ಲಿ ವಿಜಯನಗರ ಕಾಲದ ದೇವಲಾಪುರ ಎನ್ನುವ ಗ್ರಾಮವಿದೆ. ಇಂದು ಇದು ಪಾಳು ಗ್ರಾಮವಾಗಿದೆ. ಐತಿಹಾಸಿಕ ಕೆರೆ ದುರಸ್ತಿ ಇಲ್ಲದೇ ಗಿಡ-ಮರ, ಮುಳ್ಳು ರಾಶಿಯಲ್ಲಿ ಗುರುತು ಸಿಗದಷ್ಟು ಹಾಳಾಗಿದೆ.

ಕೆರೆಯಲ್ಲಿ ನಿರಂತರ ನಡೆಯುತ್ತಿರುವ ಅತಿಕ್ರಮಣ, ಕೊಳವೆಬಾವಿ ಕೊರೆಸಿ ಕೆಲವು ರೈತರು ಜಮೀನು ಮಾಡಿಕೊಂಡಿದ್ದಾರೆ. ಹಾಗಾಗಿ ತಾಲೂಕಿನಲ್ಲಿ ದೊಡ್ಡ ಕೆರೆಗಳು ತುಂಬಿದರೂ ಈ ಕೆರೆ ತುಂಬುವುದಿಲ್ಲ.

10 ವರ್ಷಗಳ ಹಿಂದೆ ತುಂಬಿದ್ದ ಕೆರೆ ಈ ವರ್ಷ ತುಂಬುವ ಸಾಧ್ಯತೆ ಇದೆ. ಇಲ್ಲಿ ಅನಧಿಕೃತ ಕೊಳವೆಬಾವಿ ಇರುವುದರಿಂದ ಕೆರೆಯ ನೀರು ಪೋಲಾಗುತ್ತಿದೆ. ಈ ಕೆರೆ ಈ ವರ್ಷ ಕೋಡಿ ಬಿದ್ದರೆ ಗಜಾಪುರ, ಅಕ್ಕಾಪುರ, ಬಡೇಲಡಕು, ಕಂದಗಲ್ಲು, ತಿಮ್ಮಲಾಪುರ, ಬತ್ತನಹಳ್ಳಿ, ತುಪ್ಪಾಕನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ರೈತರಿಗೆ ಅಂತರ್ಜಲ ವೃದ್ಧಿಯಾಗುತ್ತದೆ. ಈ ಕೆರೆ ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಕೂಡ್ಲಿಗಿ ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಈ ಕೆರೆಯಲ್ಲಿರುವ ಅಕ್ರಮ ಕೊಳವೆಬಾವಿ ತೆರವಿಗೆ ಈವರೆಗೂ ಕ್ರಮವಾಗಿಲ್ಲ. ಕೆರೆಯ ಅಚ್ಚುಕಟ್ಟು ಪ್ರದೇಶ ಗುರುತಿಸಬೇಕಿದೆ. ಪ್ರತಿವರ್ಷ ಕೆರೆ ದುರಸ್ತಿಗೆ ಲಕ್ಷಗಟ್ಟಲೇ ಹಣ ಬಂದಾಗ ಕೆರೆ ಸಂರಕ್ಷಣೆ ಹದ್ದುಬಸ್ತು ಕೆಲಸ ಮಾಡಿಸದೇ ಕೇವಲ ಜಂಗಲ್ ಕಟಿಂಗ್ ಮಾಡಿಸಿ ಕೈ ತೊಳೆದುಕೊಂಡು ಬಿಡುತ್ತಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಗಜಾಪುರ ಗ್ರಾಪಂ ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ.

ಕೆರೆಯಲ್ಲಿ ರೈತರು ಕೊಳವೆಬಾವಿ ಕೊರೆಯಿಸಿರುವುದು ನಿಜ. ಅತಿಕ್ರಮಣವಾಗಿರುವುದೂ ನಿಜ. ಇನ್ನೆರಡು ದಿನಗಳಲ್ಲಿ ಕೆರೆ ಸಂರಕ್ಷಣಾ ಸಂಘದವರ ಮಾಹಿತಿ ಆಧಾರದಲ್ಲಿ ರೈತರಿಗೆ ನೋಟಿಸ್ ಕೊಡುತ್ತೇವೆ. ಕೆರೆಯ ನೀರು ಸಂರಕ್ಷಿಸಲು ಮರಳಿನ ಚೀಲಗಳನ್ನು ಕೊಳವೆಬಾವಿಗಳಿಗೆ ಬಿಟ್ಟು ನೀರು ಪೋಲಾಗದಂತೆ ತಡೆಯುತ್ತೇವೆ ಎನ್ನುತ್ತಾರೆ ಕೂಡ್ಲಿಗಿ ಸಣ್ಣ ನೀರಾವರಿ ಇಲಾಖೆಯ ಸೆಕ್ಷನ್ ಎಂಜಿನಿಯರ್ ರಾಜು.