ಮೈನಿಂಗ್ ಯಾರ್ಡ್‌ಗೆ ಅಧಿಕಾರಿಗಳ ಭೇಟಿ

| Published : Aug 19 2025, 01:00 AM IST

ಸಾರಾಂಶ

ನಗರದ ರೈಲ್ವೆ ಗೇಟ್ ಬಳಿ ಇರುವ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಾಸ್ತಾಂಶವನ್ನು ಅರಿಯಲು ಮತ್ತು ವರದಿ ಸಿದ್ಧಪಡಿಸಲು ಉಪವಿಭಾಗಾಧಿಕಾರಿ ಮೊಹಬೂಬ್ ಜಿಲಾನಿ ವಾಯುಮಾಲಿನ್ಯ ಪರಿಸರ ಅಧಿಕಾರಿ, ಜಿಲ್ಲಾ ಯೋಜನಾಧಿಕಾರಿ, ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಳ್ಳಕೆರೆ: ನಗರದ ರೈಲ್ವೆ ಗೇಟ್ ಬಳಿ ಇರುವ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಾಸ್ತಾಂಶವನ್ನು ಅರಿಯಲು ಮತ್ತು ವರದಿ ಸಿದ್ಧಪಡಿಸಲು ಉಪವಿಭಾಗಾಧಿಕಾರಿ ಮೊಹಬೂಬ್ ಜಿಲಾನಿ ವಾಯುಮಾಲಿನ್ಯ ಪರಿಸರ ಅಧಿಕಾರಿ, ಜಿಲ್ಲಾ ಯೋಜನಾಧಿಕಾರಿ, ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲ್ವೆ ನಿಲ್ದಾಣದ ಬಳಿ ಇರುವ ಡಂಪಿಂಗ್ ಯಾರ್ಡ್ ಬಗ್ಗ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ಡಂಪಿಂಗ್ ಯಾರ್ಡ್‌ನಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ನೀಡಿದರು. ಪ್ರತಿನಿತ್ಯ ಧೂಳು ಹಾಗೂ ಶಬ್ದದಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಮೊಹಬೂಬ್ ಜಿಲಾನಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವೆ. ಈಗಾಗಲೇ ಅನುಮತಿ ಪಡೆದ ಖಾಸಗಿ ಕಂಪನಿಯವರೊಂದಿಗೂ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದ್ದಾರೆ, ಪ್ರತಿನಿತ್ಯ ಇಲ್ಲಿಗೆ ಆಗಮಿಸುವ ಪ್ರಮಾಣ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಿದ್ಧಪಡಿಸಿ ನೀಡಲಿದ್ದಾರೆ. ನಂತರ ಸರ್ಕಾರ ಕ್ರಮವಹಿಸಲಿದೆ, ಈ ಬಗ್ಗೆ ಜನರ ಹಿತದೃಷ್ಟಿಯಿಂದ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ವರದಿ ನಂತರ ಮುಂದಿನ ಕ್ರಮವನ್ನು ಜರುಗಿಸಲಾಗುವುದು, ಸಾರ್ವಜನಿಕರು ಜಿಲ್ಲಾ ಆಡಳಿತದೊಂದಿಗೆ ಸಹಕರಿಸಬೇಕೆಂದರು.

ತಹಸೀಲ್ದಾರ್ ರೇಹಾನ್ ಪಾಷ, ಜಿಲ್ಲಾ ಯೋಜನಾಧಿಕಾರಿ ರೇಷ್ಮ ಹಾನಗಲ್, ಗಣಿ ಮತ್ತು ಭೂಗರ್ಭ ಇಲಾಖೆ ಉಪನಿರ್ದೇಶಕರು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಭಾಸ್ಕರ್, ಪೌರಾಯುಕ್ತ ಜಗರೆಡ್ಡಿ, ಠಾಣಾ ಇನ್ಸ್‌ಪೆಕ್ಟರ್‌ ಕೆ.ಕುಮಾರ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ಇನ್ನಿತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.