ಐತಿಹ್ಯ ಪುಷ್ಕರಣಿಗಳಿಗೆ ಅಧಿಕಾರಿಗಳ ಭೇಟಿ

| Published : May 16 2024, 12:54 AM IST / Updated: May 16 2024, 12:55 AM IST

ಸಾರಾಂಶ

ತಾಲೂಕು ವ್ಯಾಪ್ತಿಯ ಐತಿಹಾಸಿಕ ಪುಷ್ಕರಣಿಗಳಿರುವ ಸ್ಥಳಕ್ಕೆ ಬುಧವಾರ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಹಂಪಿಯ ಉಪನಿರ್ದೇಶಕ ಡಾ. ಆರ್. ಶೇಜೇಶ್ವರ ಭೇಟಿ ನೀಡಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕು ವ್ಯಾಪ್ತಿಯ ಐತಿಹಾಸಿಕ ಪುಷ್ಕರಣಿಗಳಿರುವ ಸ್ಥಳಕ್ಕೆ ಬುಧವಾರ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಹಂಪಿಯ ಉಪನಿರ್ದೇಶಕ ಡಾ. ಆರ್. ಶೇಜೇಶ್ವರ ಭೇಟಿ ನೀಡಿ ವೀಕ್ಷಿಸಿದರು.

ಮೊದಲಿಗೆ ತಾಲೂಕಿನ ಸೋಮಸಾಗರ ಗ್ರಾಮದ ರೈತರ ಜಮೀನಿನಲ್ಲಿರುವ ಪುಷ್ಕರಣಿಗೆ ಭೇಟಿ ನೀಡಿ ಸಂಶೋಧನೆ ನಡೆಸಿದರು.

ಈ ವೇಳೆ ಪುಷ್ಕರಣಿ ಸುತ್ತಲೂ ಭೇಟಿ ನೀಡಿ, ಅಲ್ಲಿರುವ ಕೆತ್ತನೆಯ ಚಿತ್ರ ಸೆರೆ ಹಿಡಿದರು. ಪುಷ್ಕರಣಿಗಳ ಐತಿಹ್ಯದ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು. ನಂತರ ಬಸರಿಹಾಳ ಗ್ರಾಮದ ರೈತರ ಜಮೀನಿನಲ್ಲಿ ಪುಷ್ಕರಣಿ ಹಾಗೂ ಹುಲಿಹೈದರ್ ಗ್ರಾಮದಲ್ಲಿ ವಿವಿಧ ಪುಷ್ಕರಣಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಈ ಕುರಿತು ಪರಂಪರೆ ಇಲಾಖೆಯ ಶೇಜೇಶ್ವರ ಮಾತನಾಡಿ, ಸೋಮಸಾಗರ, ಬಸರಿಹಾಳ ಹಾಗೂ ಹುಲಿಹೈದರ ಭಾಗಗಳಲ್ಲಿನ ಪುಷ್ಕರಣಿ(ಕಲ್ಯಾಣಿ)ಗಳ ಸಂಪೂರ್ಣ ಮಾಹಿತಿ ಪಡೆದು, ಅಧ್ಯಯನ ಮಾಡುವ ಮೂಲಕ ಸರ್ಕಾರದಿಂದ ಅಧಿಸೂಚನೆಯ ನಂತರ ಸಂರಕ್ಷಿಸುವುದಾಗಿ ತಿಳಿಸಿದರು.

ತಹಸೀಲ್ದಾರ ವಿಶ್ವನಾಥ ಮುರುಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್. ವೀರೇಂದ್ರಕುಮಾರ, ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ, ಪುರಾತತ್ವ ಸಹಾಯಕ ಡಾ. ಮಂಜಾ ನಾಯ್ಕ, ಪಿಡಿಒ ಬಸವರಾಜ ಸಂಕನಾಳ ಹಾಗೂ ತಾಲೂಕು ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.

ಪತ್ರಿಕೋದ್ಯಮ, ಬಿಎಸ್ಸಿ ಪ್ರವೇಶಾತಿಗೆ ಆಹ್ವಾನ:

ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗಗ್ಗಳಶೆಟ್ರ ಸ.ಪ್ರ.ದ. ಕಾಲೇಜಿನಲ್ಲಿ ಈ ವರ್ಷ ಪತ್ರಿಕೋದ್ಯಮ ಹಾಗೂ ಬಿಎಸ್ಸಿ ವಿಭಾಗವನ್ನು ಆರಂಭಿಸಲಾಗಿದೆ.ಹಿಂದುಳಿದ ಹಾಗೂ ಬರ ಪ್ರದೇಶವಾದ ಕನಕಗಿರಿ ತಾಲೂಕಿನ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಕ್ತ ವರ್ಷ ಪತ್ರಿಕೋದ್ಯಮ ಹಾಗೂ ಬಿಎಸ್ಸಿ ವಿಭಾಗ ತೆರೆಯಲಾಗಿದೆ. ಸದರಿ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರವೇಶಾತಿ ಪ್ರಾರಂಭವಾಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಲೇಜಿನ ಪಾಂಶುಪಾಲ ಬಜರಂಗಬಲಿ ಪ್ರಕಟಣೆಯಲ್ಲಿ ಕೋರಿದ್ದಾರೆ.