ಗಡಿಯಲ್ಲಿ ಸೈನಿಕರು ದೇಶವನ್ನು ಕಾಪಾಡಿದರೆ, ದೇಶದ ಒಳಗೆ ರೈತರು ದೇಶವನ್ನು ಕಾಪಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ತಯಾರಾಗುವ ಎಲ್ಲಾ ವಸ್ತುಗಳಿಗೂ ಬೆಲೆ ನಿಗದಿಪಡಿಸುವ ನಮ್ಮ ಸರ್ಕಾರಗಳು ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡುವುದಿಲ್ಲ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ದೇಶದ ಬೆನ್ನೆಲುಬಾದ ರೈತರ ಕೆಲಸಗಳಿಗೆ ಸ್ಪಂದಿಸದೆ ವಿನಃ ಕಾರಣ ಅಲೆದಾಡಿಸುವ ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಗಳನ್ನು ಜೈಲಿಗಟ್ಟುವ ಕೆಲಸವನ್ನು ರೈತ ಸಂಘಟನೆಗಳು ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.ಪಟ್ಟಣದ ಶ್ರೀ ಕನ್ನಾಂಬಾಡಿ ಅಮ್ಮನವರ ದೇವಾಲಯದ ಬಳಿ ಆಯೋಜಿಸಿದ್ದ ರೈತರ ಕುಂದುಕೊರತೆ ನಿವಾರಣಾ ಹಾಗೂ ಸಮಾಲೋಚನಾ ಸಭೆ, ತಂಬಾಕು ರೈತರ ಸಭೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿಯಲ್ಲಿ ಸೈನಿಕರು ದೇಶವನ್ನು ಕಾಪಾಡಿದರೆ, ದೇಶದ ಒಳಗೆ ರೈತರು ದೇಶವನ್ನು ಕಾಪಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ತಯಾರಾಗುವ ಎಲ್ಲಾ ವಸ್ತುಗಳಿಗೂ ಬೆಲೆ ನಿಗದಿಪಡಿಸುವ ನಮ್ಮ ಸರ್ಕಾರಗಳು ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಏನಾದರೂ ರೈತರು ತಮ್ಮ ದಿನನಿತ್ಯದ ಕೆಲಸಗಳಿಗೆ ಕಚೇರಿಗಳಿಗೆ ಹೋದರೆ ಅಲ್ಲಿ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಅಲೆದಾಡಿಸಿ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳನ್ನು ಜೈಲಿಗಟ್ಟುವ ಕೆಲಸವನ್ನು ರೈತ ಸಂಘ ಮಾಡುತ್ತಿದೆ ಎಂದರು.1980ರಲ್ಲಿ ರೈತ ಸಂಘ ಸ್ಥಾಪನೆಯಾಗಿದ್ದು, ಇಷ್ಟು ವರ್ಷ ಕಳೆದರೂ ಸಂಘದ ಧ್ಯೇಯೋದ್ದೇಶಗಳು ಈಡೇರಿಲ್ಲ. ರೈತನ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಇಂದು ರೈತನ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಶ್ರೀಮಂತರಾಗುತ್ತಿದ್ದಾರೆ. ತನ್ನ ನಿಸ್ವಾರ್ಥ ಸೇವೆಯ ಮೂಲಕ ದೇಶಕ್ಕೆ ಅನ್ನ ಕೊಡುವ ರೈತನ ಸಮಸ್ಯೆಗಳಿಗೆ ಹೆಗಲುಕೊಡುವ ಸರ್ಕಾರ ಮತ್ತು ಜನಪ್ರತಿನಿಧಿಗಳ ಕೊರತೆ ಕಾಡುತ್ತಿದೆ. ರೈತರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ. ರೈತ ಸಂಘದ ಸಂಘಟನೆಯ ಮೂಲಕ ಒಗ್ಗೂಡಿ ತಮ್ಮ ಕುಂದುಕೊರತೆ ನಿವಾರಿಸಿಕೊಳ್ಳಬೇಕಾಗಿದ್ದು ಎಲ್ಲರೂ ಒಮ್ಮತದಿಂದ ಸಂಘಟನೆಯ ನಿಯಮಾನುಸಾರ ನಡೆದು ಅಭಿವೃದ್ಧಿ ಹೊಂದೋಣ ಎಂದರು.
ತಾಲೂಕು ಘಟಕದ ಅಧ್ಯಕ್ಷ ಚಪ್ಪರದಹಳ್ಳಿ ಅಜೀತ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿರುಮಲಾಪುರ ರಾಮೇಗೌಡ ಮಾತನಾಡಿ, ತಾಲೂಕಿನಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆದರೂ, ತಂಬಾಕಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ತಂಬಾಕು ಮಂಡಳಿ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಅನೇಕ ಭಾಗಗಳಲ್ಲಿ ಜಮೀನು ಪೋಡಿಗಳಾಗಿಲ್ಲ ಈ ಬಗ್ಗೆ ತಹಶೀಲ್ದಾರ್, ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.ಹಾಗೆಯೇ ಸಾಗುವಳಿ ಪತ್ರಗಳನ್ನು ನೀಡುವಂತೆ ರೈತರು ಅರ್ಜಿ ಸಲ್ಲಿಸಿದ್ದರೂ ಜನಪ್ರತಿನಿಧಿಗಳು ತಮಗೆ ತಮ್ಮ ಪಕ್ಷಕ್ಕೆ ಬೇಕಾದವರನ್ನು ಪರಿಗಣಿಸಿ ಬೇರೆ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ರಾಜಕಾರಣಿಗಳನ್ನು ಬಹಿಷ್ಕಾರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶಕೀಲಾ ಬಾನು, ಎಡಿಎಲ್ಆರ್ ಮುನಿಯಪ್ಪ, ರಾಜ್ಯ ಘಟಕದ ಗೌರವಾಧ್ಯಕ್ಷ ಸಂಪತ್ ಕುಮಾರ್, ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ ಕುಮಾರ್ ಗೌಡ, ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಸಂಚಾಲಕ ಮಾವಳ್ಳಿಪುರ ಧನರಾಜ್, ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಉಪಾಧ್ಯಕ್ಷ ಲೋಕೇಶ್, ಹೋಬಳಿ ಘಟಕದ ಅಧ್ಯಕ್ಷ ಲೋಕೇಶ್ ಆರಾಧ್ಯ, ರಾಜೇಗೌಡ, ಬಸವರಾಜ್, ಶ್ರೀನಿವಾಸ್, ಗುರುಮೂರ್ತಿ, ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳಾದ ನಾಗೇಶ್ ಹೆಗ್ಗಂದೂರು ನಿಂಗರಾಜು, ಜಯಲಕ್ಷ್ಮಿ, ಮಾರಮ್ಮ, ದೇವೇಗೌಡ, ಆದರ್ಶ್ ಅರಸ್ ಮೊದಲಾದವರು ಇದ್ದರು.