ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಡಾನೆ ಹಾವಳಿ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಹಾಗೂ 15ನೇ ಹಣಕಾಸು ಯೋಜನೆ, ನರೇಗಾ ಯೋಜನೆಯಡಿ ಅನುದಾನ ಬಳಕೆ, ಕೈಗೊಂಡಿರುವ ವಿವಿಧ ಕಾಮಗಾರಿಗಳ ಕುರಿತು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿಸ್ತೃತವಾಗಿ ಚರ್ಚಿಸಿದರು.ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮಿಕೊಂಡಿದ್ದ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸದೇ ಇದ್ದುದರಿಂದ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಕೂಡಲೇ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವಂತೆ ಒತ್ತಾಯಿಸಿದರು. ಈ ವೇಳೆ ಸಭೆಗೆ ತಡವಾಗಿ ಆಗಮಿಸಿದ ವಲಯ ಅರಣ್ಯಾಧಿಕಾರಿ ಹೇಮಂತ್ ಅವರನ್ನು ಕಾಡಾನೆ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸುಳ್ಳಕ್ಕಿ ಗ್ರಾಮದಲ್ಲಿ ವರ್ಷದಿಂದ ಬೀಡುಬಿಟ್ಟಿರುವ ಒಂಟಿ ಕಾಡಾನೆಯನ್ನು ಕೂಡಲೇ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಮೇಗಲಕೇರಿ ಗ್ರಾಮದ ರವಿ ಮಾತನಾಡಿ, ವರ್ಷದಿಂದ ನನ್ನ ತೋಟದಲ್ಲೇ ಕಾಡಾನೆ ಬೀಡು ಬಿಟ್ಟಿರುವುದರಿಂದ ತೋಟದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಪಾಳುಬಿಡುವಂತಾಗಿದೆ. ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಇದಕ್ಕೆ ಗ್ರಾಮಸ್ಥರು ಒಕ್ಕೊರಲಿನಿಂದ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ಹೇಮಂತ್ ಅವರು, ಕಾಡಾನೆ ಸ್ಥಳಾಂತರದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾಲ್ಕು ಇಟಿಎಫ್ ಸಿಬ್ಬಂದಿ ಕಾಡಾನೆ ಚಲನವಲದ ಮೇಲೆ ನಿಗಾ ವಹಿಸಿದ್ದಾರೆ. ರಾತ್ರಿ ಪಾಳಿಯಲ್ಲೂ ಕಾಡಾನೆ ಚಲನವಲದ ಬಗ್ಗೆ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಯ್ಯ ಅವರು ಮಾತನಾಡಿ, ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ನೀಡಿದರು. ಅಂಗವಿಲರಿಗೆ ಮೀಸಲಾದ ಅನುದಾನ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಅನುದಾನದಲ್ಲಿ ಸೂಕ್ತ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ಸ್ಥಳೀಯವಾಗಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಸೂಕ್ತ ಸ್ಥಳದಲ್ಲಿ ಕಾಮಗಾರಿ ನಡೆಸಬೇಕು. ಎಲ್ಲಂದರಲ್ಲಿ ಬೇಕಾಬಿಟ್ಟಿಯಾಗಿ ಮಾಡದಂತೆ ಸಲಹೆ ನೀಡಿದರು.
ಅದೇ ರೀತಿ ನರೇಗಾ ಯೋಜನೆಯಡಿ ರಸ್ತೆ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಈ ಹಿಂದೆ ರಸ್ತೆ ಕಾಮಗಾರಿ ಎಲ್ಲಿ ಅರ್ಧಕ್ಕೆ ನಿಂತಿರುತ್ತದೆ, ಅಲ್ಲಿಂದಲೇ ಪ್ರಾರಂಭ ಮಾಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಮತ್ತು ಹೆಚ್ಚು ಜನರು ತಿರುಗಾಡುವ ಕಡೆಗಳಲ್ಲಿ ರಸ್ತೆ ನಿರ್ಮಾಣ ಮಾಡಬೇಕು. ಇನ್ನೂ ಹಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯಬೇಕಿದ್ದು, ಅವುಗಳನ್ನು ಕ್ರಿಯಾ ಯೋಜನೆಯಡಿ ಸೇರಿಕೊಳ್ಳುವಂತೆ ಒತ್ತಾಯಿಸಿದರು. ಇದೇ ವೇಳೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿದೀಪ, ರಸ್ತೆ ನಿರ್ಮಾಣ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ವಿ.ರಂಗನಾಥ, ಉಪಾಧ್ಯಕ್ಷೆ ಭಾಗ್ಯ, ನೋಡಲ್ ಅಧಿಕಾರಿ ಹರೀಶ್, ಸದಸ್ಯರಾದ ಚನ್ನಯ್ಯ, ಜಗದೀಶ್, ಎನ್.ಎಲ್. ದ್ವಾರಕೀಶ್, ನಾಗೇಶ್, ಅಂಬಿಕ, ನಾಗೇಶ್, ಸರಿತ, ಭಾಗ್ಯ, ಜೆ.ಜೆ.ಜಗದೀಶ್, ಪಲ್ಲವಿ, ಶೀಲಾಮಣಿ, ಎ.ವಿ.ನಂದೀಶ್ ಹಾಜರಿದ್ದರು.* ಬಾಕ್ಸ್ಸ್::: ನೂರಾರು ಅರ್ಜಿಗಳ ಸ್ವೀಕಾರ
ಗ್ರಾಮಸಭೆಯಲ್ಲಿ ನೂರಾರು ಜನರು ಭಾಗವಹಿಸಿ ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯ ಪಡೆಯಲು ನೂರಾರು ಅರ್ಜಿಗಳನ್ನು ಸ್ವೀಕಾರ ಮಾಡಿದರು. ಮನೆ, ರಸ್ತೆ, ಚರಂಡಿ, ದನದ ಕೊಟ್ಟಿಗೆ, ಬಾವಿ, ಕುರಿ ಸಾಕಾಣಿಕೆ ಶೆಡ್, ಅಡಿಕೆ, ಮೆಣಸು, ಕಾಫಿ ತೋಟದಲ್ಲಿ ನೀರು ಗುಂಡಿ ನಿರ್ಮಾಣಕ್ಕೆ ಸಹಾಯಧನ ಒದಗಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಯಿತು.;Resize=(128,128))
;Resize=(128,128))
;Resize=(128,128))