ಸಾರಾಂಶ
ಸವಣೂರ: ಭೌತಿಕ ಗುರಿ ಮೇಲೆ ಅನುದಾನ ಪಡೆದು ಸಾಧನೆ ಕಡಿಮೆ ತೋರಿಸುವ ಹಿನ್ನೆಲೆಯಲ್ಲಿ ವರ್ಷಕ್ಕೆ 1.20 ಕೋಟಿ ಹಣವನ್ನು ಅಧಿಕಾರಿಗಳು ಕತ್ತರಿ ಹಾಕುತ್ತಿರಿ ಅಲ್ವೇನ್ರಿ ಎಂದು ಸಿಡಿಪಿಓ ಉಮಾ ಕೆ.ಎಸ್. ಅವರನ್ನು ಇಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ಶಾಸಕರ ಪ್ರಶ್ನೆಗೆ ಉತ್ತರಿಸಲು ತಡಬಡಿಸಿದ ಸಿಡಿಪಿಒ ಇಲ್ಲ, ಹಿಂದಿನ ಗುರಿ ಬಗ್ಗೆ ಮುಂದಿನ ತಿಂಗಳು ಖರ್ಚಿನಲ್ಲಿ ಬಂದಿರುತ್ತೆ ಎಂದು ಸಮಜಾಯಿಸಿ ನೀಡಿದರು.2017ರಿಂದ ಇದುವರೆಗೂ 20ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಇವೆ ಎಂದರೆ ಇದು ಹೇಗೆ ಸಾಧ್ಯ ಉತ್ತರಿಸಿ ಎಂದರು.
ಇಲಾಖೆಯಿಂದ ಸಂಬಂಧಪಟ್ಟ ಗ್ರಾಪಂಗಳಿಗೆ ಅನುದಾನ ಬಿಡುಗಡೆಗೊಂಡಿದ್ದರು ಸಹ ಕಾರಣಾಂತರಗಳಿಂದ ತಡವಾಗಿದೆ ಎಂದರು. ಇದು ಎಲ್ಲ ಕಾರಣ ಹೇಳಬೇಡಿ ಕೂಡಲೇ ಕಾಮಗಾರಿ ಸಂಪೂರ್ಣ ಮುಗಿಸಲು ಸಹಕಾರ ನೀಡಿ ವರದಿಯನ್ನು ನೀಡಲು ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಅವರಿಗೆ ತಾಕೀತು ಮಾಡಿದರು.ಮೆರಿಟ್‌ನಲ್ಲಿ ಪಾಸ್ ಆಗಿ ನೌಕರಿಗಾಗಿ ಮತ್ತೆ ಪರೀಕ್ಷೆ ಬರೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವವರು ಕಲಿಸಿದ ಶಾಲೆ ಫಲಿತಾಂಶಕ್ಕಿಂತ, ಸರ್ಕಾರಿ ನೌಕರಿ ಸಿಗದೇ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವವರು ಕಲಿಸಿದ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಬರುತ್ತಿದೆ ಎಂದರೆ, ಇವರಿಗೆ ಕಲಿಸಲು ಆಸಕ್ತಿ ಇಲ್ಲ ಎಂದು ಅರ್ಥ, ನಿಮ್ಮ ಶಿಕ್ಷಕರಿಗೆ ಭಯ ಇಲ್ಲ ಅಲ್ವೇ ಎಂದು ಶಾಸಕ ಪಠಾಣ ಅವರು ಬಿಇಒ ಎಂ.ಎಫ್. ಬಾರ್ಕಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತು ಮಾತನಾಡಿದ ಬಿಇಒ ಬಾರ್ಕಿ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿ ಜಿಲ್ಲೆಯಲ್ಲಿ ತಾಲೂಕು ಎರಡನೇ ಸ್ಥಾನ ಪಡೆದಿತ್ತು. ಈ ಬಾರಿ ಪ್ರಥಮ ಸ್ಥಾನ ಪಡೆಯಲಿದೆ. ಪೂರ್ವ ಸಿದ್ದತೆ ಉತ್ತಮವಾಗಿದೆ ಎಂದರು. ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕುರಿತು ಹೆಚ್ಚಿನ ಮಹತ್ವವನ್ನು ನಾನು ನೀಡುತ್ತಿದ್ದೇನೆ. ಅಧಿಕಾರಿಗಳ ಸಹಕಾರ ಅವಶ್ಯವಾಗಿದೆ ಎಂದರು.ಸವಣೂರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಟ್ಕಾ, ಗಾಂಜಾ ಮಾರಾಟ ಹಾವಳಿ ತಡೆಯಲು ಏನ್ ಕ್ರಮ ಕೈಗೊಂಡಿದ್ದೀರಾ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಪಿಎಸ್‌ಐ ಮೇಘರಾಜ ದೊಡ್ಡಮನಿ ಅವರನ್ನು ತರಾಟೆಗೆ ತೆಗೆದುಕೊಂಡು, ಯಾವ ಕ್ರಮಕ್ಕೆ ಮುಂದಾಗಿದ್ದೀರಿ ಎಂದು ಪಿಎಸ್‌ಐ ಮೇಘರಾಜ ದೊಡ್ಡಮನಿ ಅವರನ್ನು ಪ್ರಶ್ನಿಸುತ್ತಿದ್ದಂತೆ ಮೇಗರಾಜ ದೊಡ್ಡಮನಿ ಸಭೆಗೆ ಉತ್ತರಿಸಿ ಮಟ್ಕಾ ಹಾಗೂ ಇತರೆ ಚಟುವಟಿಕೆಗಳನ್ನು ತಡೆಯಲು 38 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದರು.
ಆಕ್ರೋಶಗೊಂಡ ಶಾಸಕ ಪಠಾಣ ಸುಮ್ನೇ ಕುಳತಕೊಳ್ಳಿ, ನಾನು ಎಲ್‌ಎಲ್‌ಬಿ ಓದಿದ್ದೇನೆ. ಅಬ್ಬಬ್ಬಾ ಅಂದ್ರೇ 300 ರು. ಅಷ್ಟೇ ಅಲ್ವಾ? ಮತ್ತೇ ಅದೇ ದಂಧೆ ಮಾಡತ್ತಾ ಇದ್ದಾರೆ. ಸವಣೂರಿನಲ್ಲಿ ಮಟ್ಕಾ ದಂಧೆಗೆ ಬಡ ಯುವಕರು ಹಾಳಾಗುತ್ತಿದ್ದಾರೆ. ಕೂಡಲೇ ಸಂಪೂರ್ಣ ಬಂದ್ ಆಗಬೇಕು ಎಂದು ತಾಕೀತು ಮಾಡಿದರು.ನೀರಾವರಿ ಯೋಜನೆಗಾಗಿ ಪ್ರತ್ಯೇಕ 100 ಕೋಟಿ ಅನುದಾನವನ್ನು ನೀಡಿದ್ದಾರೆ. ಪಟ್ಟಣದ ಮೋತಿ ತಲಾಬ (ದೊಡ್ಡಕೆರೆ)ಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಅಳವಡಿಸಿ ನದಿ ನೀರು ಹರಸುವದು ಸೇರಿದಂತೆ ಕ್ಷೇತ್ರದ 50 ಕೆರೆಗಳನ್ನು ಸೌಂದರ್ಯಕರಣಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ, ಈ ಕುರಿತು ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ನಾಗಪ್ಪ ತಿಪ್ಪಕ್ಕನವರ, ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಉಪ ವಿಬಾಗಾಧಿಕಾರಿ ಮಮತಾ ಹೊಸಗೌಡ್ರ, ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಹಾಗೂ ಇತರರು ಇದ್ದರು.
ಸಭೆಯಲ್ಲಿ ರೇಷ್ಮೆ ಸಾಕಾಣಿಕೆ ಮನೆ ನಿರ್ಮಾಣಕ್ಕೆ ಕೇಂದ್ರ ಪುರಸ್ಕೃತ ಸಿಲ್ಕಿ ಸಮಗ್ರ ಯೋಜನೆಯಡಿ 15 ಫಲಾನುಭವಿಗಳಿಗೆ ರೇಷ್ಮೆ ಇಲಾಖೆ ವತಿಯಿಂದ 1000 ಚ.ಅಡಿಗೆ 3,37,500 ರು. (ಎಸ್‌ಸಿ-ಎಸ್‌ಟಿ ಫಲಾನುಭವಿಗೆ 4 ಲಕ್ಷ 5 ಸಾವಿರ) ಸಹಾಯ ಧನ ಬಿಡುಗಡೆ ಆದೇಶ ಪತ್ರ ವಿತರಿಸಲಾಯಿತು.