ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ಆಯೋಜಿಸಲು ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಫೆಬ್ರವರಿ 13ರಿಂದ 15ರ ವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಸಿದ್ಧತೆಗಳಿಗಾಗಿ ಈಗಾಗಲೇ 21 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ತಾರಾ ಮೆರುಗು ಮತ್ತು ಐದು ವೇದಿಕೆಗಳು

ಈ ಬಾರಿಯ ಉತ್ಸವದಲ್ಲಿ ಒಟ್ಟು ಐದು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಖ್ಯಾತ ಕಲಾವಿದರಾದ ಡಾಲಿ ಧನಂಜಯ್, ಧ್ರುವ ಸರ್ಜಾ, ರಚಿತಾ ರಾಮ್, ರುಕ್ಮಿಣಿ ವಸಂತ್, ಉಪೇಂದ್ರ ಹಾಗೂ ಗಾಯಕರಾದ ಸಂಜಿತ್ ಹೆಗ್ಡೆ, ಶ್ರೇಯಾ ಘೋಷಾಲ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರಿಗೂ ಸೂಕ್ತ ವಸತಿ ಮತ್ತು ಶಿಷ್ಟಾಚಾರದಂತೆ ಆತಿಥ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಹೆಚ್ಚುವರಿ ಬಸ್ ಸೌಲಭ್ಯ

ನೆರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು. ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ "ಬ್ಲಾಕ್‌ ಸ್ಪಾಟ್'''' ಗಳನ್ನು ಗುರುತಿಸಿ ಕೂಡಲೇ ದುರಸ್ತಿಪಡಿಸಲು ಮತ್ತು ರಸ್ತೆ ಬದಿಯ ಜಂಗಲ್ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.

ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ''''ಪಿಕಪ್ ಮತ್ತು ಡ್ರಾಪ್'''' ವ್ಯವಸ್ಥೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಮಾಡಲಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಛತೆ, ಕುಡಿಯುವ ನೀರು ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತಿಮ್ಮಪ್ಪ ಅವರಿಗೆ ಸೂಚಿಸಲಾಯಿತು. ಜನರ ಆರೋಗ್ಯ ರಕ್ಷಣೆಗಾಗಿ ಉತ್ಸವದ ಸ್ಥಳದಲ್ಲಿ 8 ವೈದ್ಯಕೀಯ ಸ್ಟಾಲ್‌ಗಳು ಹಾಗೂ 108 ಅಂಬುಲೆನ್ಸ್ ಸದಾ ಸಿದ್ಧವಿರಲಿವೆ.

ಕೃತಕ ಜೂ ಮತ್ತು ಸ್ತಬ್ದಚಿತ್ರ

ಅರಣ್ಯ ಇಲಾಖೆ ವತಿಯಿಂದ ಕೃತಕ ಮೃಗಾಲಯ ಹಾಗೂ ವಿಜಯನಗರದ ಗತ ವೈಭವ ಸಾರುವ ಸ್ತಬ್ದಚಿತ್ರಗಳು ಜನರ ಕಣ್ಮನ ಸೆಳೆಯಲಿವೆ. ಸಾಹಸ ಕ್ರೀಡೆ, ಗಾಳಿಪಟ ಉತ್ಸವ, ಶಿಲ್ಪಕಲೆ, ರಂಗೋಲಿ ಸ್ಪರ್ಧೆ ಹಾಗೂ ಕವಿಗೋಷ್ಠಿ, ವಿಚಾರಗೋಷ್ಠಿಗಳ ಮೂಲಕ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುವುದು.ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು. ಅಧಿಕಾರಿಗಳು ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ಅವರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಮಹಮದ್ ಅಲಿ ಅಕ್ರಂ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.