ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಒಕ್ಕಲಿಗರ ಪ್ರಾಬಲ್ಯವುಳ್ಳ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಒಕ್ಕಲಿಗರ ಶಕ್ತಿ ಕೇಂದ್ರವೂ ಹೌದು. ಈ ಕ್ಷೇತ್ರದಿಂದ ಇದುವರೆಗೆ ಇಬ್ಬರನ್ನು ಹೊರತು ಪಡಿಸಿದರೆ ಒಕ್ಕಲಿಗರೇತರ ಅಭ್ಯರ್ಥಿಗಳು ಗೆಲವು ಸಾಧಿಸಲು ಸಾಧ್ಯವೇ ಆಗಿಲ್ಲ.
ಈಗ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿಯೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಸುರೇಶ್ ಅವರನ್ನು ಕಾಂಗ್ರೆಸ್, ಡಾ.ಸಿ.ಎನ್ .ಮಂಜುನಾಥ್ ಅವರನ್ನು ಬಿಜೆಪಿ ಪಕ್ಷಗಳು ಮಣೆ ಹಾಕಿವೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರೂಪ ಪಡೆಯಿತು. ಆನಂತರವೂ ಕ್ಷೇತ್ರದಲ್ಲಿ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಒಕ್ಕಲಿಗರೇತರರು ಗೆಲವು ಸಾಧಿಸುವುದಿರಲಿ ಠೇವಣಿಯನ್ನು ಉಳಿಸಿಕೊಂಡಿಲ್ಲ.ರಾಜಕೀಯ ಪಕ್ಷಗಳು ಮಾತ್ರವಲ್ಲ, ಇಲ್ಲಿನ ಜನರು ಕೂಡ ರಾಜಕಾರಣದಲ್ಲಿ ಸಕ್ರಿಯರು. ರಾಜ್ಯ, ರಾಷ್ಟ್ರ ರಾಜಕರಾಣದಲ್ಲೂ ಹೆಚ್ಚು ಜನಪ್ರಿಯತೆ ಪಡೆದಿರುವ ಇಲ್ಲಿನ ರಾಜಕಾರಣ ಮತ್ತು ಚುನಾವಣೆ ಎಲ್ಲವನ್ನೂ ಜನರು ಜಾತಿ ಲೆಕ್ಕಚಾರದ ಮೇಲೆಯೇ ತೀರ್ಮಾನ ಮಾಡುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿ ಜಾತಿಯೇ ಮುಖ್ಯ ಎಂಬ ವಿಚಾರವನ್ನು ಇದುವರೆಗಿನ ಚುನಾವಣೆಗಳು ಸಾಬೀತು ಪಡಿಸಿವೆ.
ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯವನ್ನು ಹೊಂದಿರುವ ಸಂಸತ್ ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಒಂದಾಗಿದೆ. ಇಲ್ಲಿ ಒಕ್ಕಲಿಗ ಜನಾಂಗದ ಮತಗಳೇ ಪ್ರಧಾನ. ರಾಜಕೀಯ ಪಕ್ಷಗಳೂ ಈ ಜನಾಂಗದವರನ್ನೇ ಕಣಕ್ಕಿಳಿಸುವುದು ವಾಡಿಕೆ.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಕ್ಕಲಿಗ ನಾಯಕರನ್ನು ಹೊರತುಪಡಿಸಿ ಬೇರೆ ಸಮುದಾಯದವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದ ಉದಾಹರಣೆ ಇದೆ. ಇದರಲ್ಲಿ ಕಾಂಗ್ರೆಸ್ ಕಂಡ ಯಶಸ್ಸನ್ನು ಜೆಡಿಎಸ್ ಕಾಣಲು ಸಾಧ್ಯವಾಗಲಿಲ್ಲ.
ಕನಕಪುರ ಸಂಸತ್ ಕ್ಷೇತ್ರ 11 ಸಾರ್ವತ್ರಿಕ, 1 ಉಪಚುನಾವಣೆ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ 3 ಸಾರ್ವತ್ರಿಕ, 1 ಉಪಚುನಾವಣೆ ಸೇರಿ 16 ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಕಾಂಗ್ರೆಸ್ - 12, ಜೆಡಿಎಸ್ - 03 ಹಾಗೂ ಬಿಜೆಪಿ - 01 ಬಾರಿ ಗೆಲವು ಸಾಧಿಸಿದೆ.ಕಾಂಗ್ರೆಸ್‌ನಿಂದ ಎಂ.ವಿ. ರಾಜಶೇಖರನ್, ಸಿ.ಕೆ.ಜಾಫರ್ ಷರೀಫ್ ಅವರನ್ನು ಹೊರತು ಪಡಿಸಿದರೆ ಉಳಿದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದಕ್ಕೆ ಸೇರಿದವರು. ಈ ಕಾರಣದಿಂದಲೇ ಪ್ರತಿ ಚುನಾವಣೆಯಲ್ಲೂ ಗೌಡರ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ.
ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ರಚನೆಯಾಯಿತು. ಅದಕ್ಕೂ ಮುನ್ನ ರಾಮನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಿಂದಿನ ಸಾತನೂರು ಕ್ಷೇತ್ರವನ್ನೂ ಒಳಗೊಂಡು), ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿತ್ತು. ದೇಶದಲ್ಲಿಯೇ ಅತಿದೊಡ್ಡ ಲೋಕ ಸಭಾ ಕ್ಷೇತ್ರ ಎಂಬ ಖ್ಯಾತಿ ಇದರದ್ದಾಗಿತ್ತು.ಕನಕಪುರ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು 1967ರಲ್ಲಿ. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ.ವಿ.ರಾಜಶೇಖರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ಇವರಿಗೆ ಒಕ್ಕಲಿಗ, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಸೇರಿದಂತೆ ಐದು ಮಂದಿ ಪೈಪೋಟಿವೊಡ್ಡಿದ್ದರು.
ಎಂ.ವಿ.ರಾಜಶೇಖರನ್ 1,21,394 ಮತಗಳನ್ನು ಪಡೆದು ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಎಂ.ಬಿ.ದಾಸ್ (73198 ಮತ) ಅವರನ್ನು 48,196 ಮತಗಳ ಅಂತರದಿಂದ ಪರಾಭವಗೊಳಿಸಿದರು. ನಂತರದಲ್ಲಿ 1971ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜಾಫರ್ ಷರೀಪ್ ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದರು. ಎನ್‌ಸಿಒ(ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ - ಓರಿಜಿನಲ್) ಪಕ್ಷದಿಂದ ಎಂ.ವಿ.ರಾಜಶೇಖನ್ ಸ್ಪರ್ಧಿಸಿದ್ದರಿಂದ ಚುನಾವಣಾ ಕಣ ರಂಗೇರುವಂತೆ ಮಾಡಿತು.ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಜಾಫರ್ ಷರೀಫ್ ಅವರು 2,43,987 ಮತ, ಎಂ.ವಿ.ರಾಜಶೇಖರನ್ 57,468 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಷೀದ್ 3631 ಮತಗಳನ್ನು ಪಡೆದರು. 1,86,519 ಮತಗಳ ಭಾರಿ ಅಂತರದಿಂದ ಜಾಫರ್ ಷರೀಫ್ ವಿಜಯ ಪತಾಕೆ ಹಾರಿಸಿದ್ದರು.
ಕನಕಪುರ ಕ್ಷೇತ್ರದಲ್ಲಿ ಜಾಫರ್ ಷರೀಫ್ ಸಂಸದರಾಗಿ ಗೆಲುವಿನ ಖಾತೆ ತೆರೆದರು. ಆದರೆ, ಮುಂದಿನ ಚುನಾವಣೆಯಲ್ಲಿ ಜಾಫರ್ ಇಲ್ಲಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು. ಇನ್ನು ಕ್ಷೇತ್ರದ ಚೊಚ್ಚಲ ಸಂಸದರಾದ ಎಂ.ವಿ. ರಾಜಶೇಖರನ್ ನಂತರದ ದಿನಗಳಲ್ಲಿ ಅನುಭವಿಸಿದ್ದು ಹ್ಯಾಟ್ರಿಕ್ ಸೋಲು. 1971, 77 ಮತ್ತು 80ರಲ್ಲಿ ರಾಜಶೇಖರನ್ ಮಕಾಡೆ ಮಲಗುವಂತೆ ಮಾಡಿದ್ದು ಇತಿಹಾಸ.ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಎಂ.ವಿ.ಚಂದ್ರಶೇಖರಮೂರ್ತಿ 1977 ಮತ್ತು 1980 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದರು. 1984 ರ ಚುನಾವಣೆಯಲ್ಲಿ ಚಂದ್ರಶೇಖರಮೂರ್ತಿಯವರ ಹ್ಯಾಟ್ರಿಕ್ ಗೆಲವಿಗೆ ಕಡಿವಾಣ ಹಾಕಲು ದೇವೇಗೌಡರು ಜನತಾ ಪಕ್ಷದಿಂದ ಮರಾಠ ಸಮುದಾಯಕ್ಕೆ ಸೇರಿದ ಪಿಜಿಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಿದರು.
ಚಂದ್ರಶೇಖರ ಮೂರ್ತಿ(305210 ಮತ) ಪ್ರತಿಸ್ಪರ್ಧಿ ಪಿಜಿಆರ್ ಸಿಂಧ್ಯಾ(298184ಮತ) ಅವರನ್ನು 7026 ಮತಗಳ ಅಂತರದಿಂದ ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳು ಅಖಾಡದಲ್ಲಿದ್ದರು.ಇದಾದ ನಂತರ 1991ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ 3ನೇ ಸ್ಥಾನಕ್ಕೆ ತಳಲ್ಪಟ್ಟರು. ಕಾಂಗ್ರೆಸ್‌ನ ಚಂದ್ರಶೇಖರಮೂರ್ತಿ ಗೆಲವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ ರಾಮಚಂದ್ರೇಗೌಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಎಂ.ವಿ.ಚಂದ್ರಶೇಖರ ಮೂರ್ತಿ 1977, 80, 84, 89, 91ರ ಚುನಾವಣೆಗಳಲ್ಲಿ ಸತತ ಗೆಲವು ಸಾಧಿಸಿದರು. ಸೋಲಿಲ್ಲದ ಸರದಾರ ಆಗಿಯೇ ಬಿಡುತ್ತಾರೆ ಎನ್ನುವಾಗ 1996ರಲ್ಲಿ ಜನತಾ ದಳದ ಎಚ್.ಡಿ.ಕುಮಾರಸ್ವಾಮಿ ಎದುರು ಸೋಲು ಅನುಭವಿಸಿದರು. 2014ರ ಚುನಾವಣೆಯಲ್ಲಿ ಒಕ್ಕಲಿಗರೇತರ ಆರ್ .ಪ್ರಭಾಕರ್ ರೆಡ್ಡಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡರು.1998ರಲ್ಲಿ ಒಕ್ಕಲಿಗ ಸಮುದಾಯದ ಎಂ.ಶ್ರೀನಿವಾಸ್ (ಬಿಜೆಪಿ), 1999ರಲ್ಲಿ ಎಂ.ವಿ.ಚಂದ್ರಶೇಖರ ಮೂರ್ತಿ (ಕಾಂಗ್ರೆಸ್), 2002ರ ಉಪ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ (ಜೆಡಿಎಸ್), 2004ರಲ್ಲಿ ತೇಜಸ್ವಿನಿ ರಮೇಶ್ (ಕಾಂಗ್ರೆಸ್), 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್) 2013ರ ಉಪಚುನಾವಣೆ ಮತ್ತು 2014, 2019ರ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲವು ಸಾಧಿಸಿದ್ದಾರೆ.