ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವರ್ತಮಾನದ ಕಾಲಕ್ಕೆ ವೃದ್ಧಾಶ್ರಮಗಳು ಅತ್ಯಗತ್ಯ ಎಂದು ಹಿರಿಯ ವೈದ್ಯೆ ಡಾ.ಎಂ.ಎನ್. ಲಕ್ಷ್ಮೀದೇವಿ ತಿಳಿಸಿದರು.ಜೆ.ಪಿ. ನಗರದಲ್ಲಿರುವ ಪೇಜಾವರ ಶ್ರೀಧಾಮದಲ್ಲಿ ಭಾನುವಾರ ನಡೆದ ಹಿರಿಯ ಹಾಸ್ಯ ಲೇಖಕ ಹಾಗೂ ಪದಬಂಧ ಜನಕ ಸತ್ಯನಾರಾಯಣ ಅವರ 2ನೇ ವರ್ಷದ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ವೃದ್ಧಾಪ್ಯದಲ್ಲಿ ಆರೋಗ್ಯದಿಂದ ಇರುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡಿದರು.
ಹಿಂದೆಲ್ಲ ಅವಿಭಕ್ತ ಕುಟುಂಬಗಳಿದ್ದು, ಒಬ್ಬರಲ್ಲ ಒಬ್ಬರು ಕುಟುಂಬದ ಹಿರಿಯರ ಜವಾಬ್ದಾರಿ ಹೊರುತ್ತಿದ್ದರು. ಆದರೆ, ಈಗ ಬಹುಪಾಲು ಕುಟುಂಬಗಳು ವಿಭಕ್ತ ಕುಟುಂಬಗಳಾಗಿದ್ದು, ಗಂಡ, ಹೆಂಡತಿ ಮತ್ತು ಒಂದು ಮಗುವಿರುವ ಕುಟುಂಬದಲ್ಲಿ ಗಂಡ- ಹೆಂಡತಿ, ಮಗ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ಹಿರಿಯರ ಕಡೆ ಗಮನಹರಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಅಲ್ಲದೆ, ಇಂದು ಕುಟುಂಬಕ್ಕಿಂತಲೂ ಹೆಚ್ಚಾಗಿ ನೋಡಿಕೊಳ್ಳುವ ಸೇವಾಮನೋಭಾವದ ಅನೇಕ ವೃದ್ಧಾಶ್ರಮಗಳಿದ್ದು, ಅಲ್ಲಿ ಅವರು ನೆಮ್ಮದಿಯಿಂದ ನೆಲೆಸಬಹುದು ಎಂದರು.ಭಾವನಾತ್ಮಕತೆ ಬೇರೆ, ವಾಸ್ತವತೆ ಬೇರೆ. ವಯಸ್ಸಾಗುತ್ತಿದ್ದಂತೆ ಕುಟುಂಬದ ಸದಸ್ಯರನ್ನು ಆಕ್ಷೇಪಿಸುವ ಸ್ವಭಾವ ಸಹಜವಾಗಿಯೇ ಬೆಳೆಯುತ್ತದೆ. ಅದನ್ನು ತಳಮಟ್ಟದಲ್ಲೇ ಮಟ್ಟ ಹಾಕಬೇಕು. ಇತರರನ್ನು ಆಕ್ಷೇಪಿಸುವ ಪ್ರವೃತ್ತಿ ಬಿಟ್ಟು ಮನಸ್ಸು ಮತ್ತು ದೇಹಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಾಗ ಆರೋಗ್ಯಕರ ಜೀವನ ಸಾಧ್ಯ ಎಂದು ಅವರು ಹೇಳಿದರು.
ಶ್ರೀರಾಮನ ಗುಣಗಳನ್ನು ನಾವೇಕೆ ಬೆಳೆಸಿಕೊಳ್ಳಬೇಕು ಕುರಿತು ಹಿರಿಯ ಗಮಕ ವಿದುಷಿ ಹಾಗೂ ಮುಕ್ತಕ ಲೇಖಕಿ ವಸಂತಾ ವೆಂಕಟೇಶ್ ಮಾತನಾಡಿ, ಶ್ರೀರಾಮ ಸಕಲ ಕಲ್ಯಾಣಗುಣಗಳನ್ನೂ ಹೊಂದಿದವನು. ಷಡ್ಗುಣ ಸಂಪನ್ನ, ಧರ್ಮಪರತೆ, ಪಿತೃ ವಾಕ್ಯ ಪರಿಪಾಲನೆ, ಕರ್ತವ್ಯ ನಿಷ್ಠೆ ಮತ್ತು ಬದ್ಧತೆ, ಸತ್ಯನಿಷ್ಠೆ, ಪ್ರಾಮಾಣಿಕತೆ, ಸ್ವಯಂ ನಿಯಂತ್ರಣ ಹಾಗೂ ಬದ್ಧತೆ, ಸ್ಥಿತಪ್ರಜ್ಞತೆ, ಸಚ್ಚಾರಿತ್ರ್ಯ, ಭ್ರಾತೃ ವಾತ್ಸಲ್ಯಗಳ ಸಂಗಮ ಎಂದರು.ವೃದ್ಧಾಪ್ಯವನ್ನು ಆನಂದಿಸುವುದು ಹೇಗೆ ಕುರಿತು ವಿಶ್ರಾಂತ ಪ್ರಾಧ್ಯಾಪಕ ಎ.ವಿ. ಸೂರ್ಯನಾರಾಯಣಸ್ವಾಮಿ ಮಾತನಾಡಿ, ನಾವು ವೃದ್ಧರು ಎಂಬ ಮನೋಭಾವನೆಯನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಬೇಕು. ಕಾಲ ಎಂದೂ ಕೆಟ್ಟಿಲ್ಲ. ಪ್ರಕೃತಿಯ ಚಲುವನ್ನು ಅನುಭವಿಸುವುದು, ಯಾವುದೇ ಬೇಧಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಭಾವ ತಾಳುವುದು, ಬದುಕಿನಷ್ಟೇ ಸಾವನ್ನೂ ಸಂತೋಷದಿಂದ ಬರ ಮಾಡಿಕೊಳ್ಳುವುದು, ಜೀವನದ ಕಡೆಯ ಕ್ಷಣದವರೆಗೂ ಹೊಸ ಹೊಸದನ್ನು ಕಲಿಯುವುದು ಮತ್ತು ದೇಶಕ್ಕಾಗಿ ಸರ್ವವನ್ನೂ ಸಮರ್ಪಿಸುವುದು ಈ ಭಾವಗಳಿಂದ ಮುಪ್ಪನ್ನು ಮುಂದೂಡುವುದರೊಂದಿಗೆ ಆನಂದವನ್ನೂ ಅನುಭವಿಸಬಹುದು ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಕೀಬೋರ್ಡ್ ಕಲಾವಿದ ವೆಂಕಟೇಶ್ ಅವರಿಗೆ ಸತ್ಯಸಾರ್ಥಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪೇಜಾವರ ಶ್ರೀಧಾಮದ ವ್ಯವಸ್ಥಾಪಕ ಗುರುನಾಥರಾವ್, ಸಮಾಜ ಸೇವಕ ಕೆ. ರಘುರಾಂ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪತ್ರಕರ್ತ ರಂಗನಾಥ್ ಮೈಸೂರು, ಲೇಖಕಿ ವಾಣಿ ಸುಬ್ಬಯ್ಯ, ಕಾದಂಬರಿಕಾರ್ತಿ ಮಂಗಳಾ ಸತ್ಯನ್ ಮತ್ತು ಕುಟುಂಬ ವರ್ಗ ಇದ್ದರು. ರವಿಶಂಕರ್ ಪ್ರಾರ್ಥಿಸಿದರು. ಮಂದಾರ ಮಹರ್ಷಿ ಸ್ವಾಗತಿಸಿದರು. ಮಮತಾ ರವಿಶಂಕರ್ ನಿರೂಪಿಸಿದರು.