ಸಾರಾಂಶ
ಹುಬ್ಬಳ್ಳಿ:
ಸ್ಮಾರ್ಟ್‌ಸಿಟಿ ಯೋಜನೆಯಡಿ ಮರು ನಿರ್ಮಿಸುತ್ತಿರುವ ನಗರದ ಹಳೇ ಬಸ್ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ 2025ರ ಜನವರಿ ಒಳಗಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿಯ ಚೆನ್ನಮ್ಮ ವೃತ್ತದ ಬಳಿಯ ಹಳೇಬಸ್ ನಿಲ್ದಾಣದ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿದ್ದು, ನೂತನ ವ್ಯವಸ್ಥೆಯ ಸಾಧಕ-ಬಾಧಕ ಪರಿಶೀಲಿಸಿದ ನಂತರವೇ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.
ಪ್ರಯಾಣಿಕರಿಗೆ ಪೂರಕವಾಗಿ ಉಪನಗರ, ನಗರ, ಬಿಆರ್‌ಟಿಎಸ್ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲು ಹಳೇಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆ ಹಾಗೂ ಮಳೆ ಕಾರಣದಿಂದ ಆಗಸ್ಟ್‌ನಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ವಿಳಂಬವಾಗಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಡಿಸೆಂಬರ್‌ನೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.ನಿಲ್ದಾಣವನ್ನು ಐದು ಅಂತಸ್ತಿನ ಸ್ಥಿರತೆಯೊಂದಿಗೆ 3 ಮಹಡಿ ಕಟ್ಟಡ ನಿರ್ಮಿಸಿದ್ದು, ಭವಿಷ್ಯದಲ್ಲಿ ವಿಸ್ತರಣೆಗೂ ಅವಕಾಶ ನೀಡಲಾಗಿದೆ. 84 ಕಾರು, 500ಕ್ಕೂ ಹೆಚ್ಚು ಬೈಕ್ ಪಾರ್ಕಿಂಗ್ ಸೇರಿದಂತೆ ಎಲ್ಲ ಬಗೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಿಲ್ದಾಣ ಆರಂಭದಿಂದ ವಾಣಿಜ್ಯ ಮಳಿಗೆ, ಪೇ ಪಾರ್ಕಿಂಗ್ ವ್ಯವಸ್ಥೆಯಿಂದ ಸಾರಿಗೆ ಸಂಸ್ಥೆಗೂ ಆದಾಯ ಬರಲಿದೆ. ಅಲ್ಲದೇ, ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಟೋರಿಕ್ಷಾ ನಿಲ್ದಾಣ ನಿರ್ಮಾಣಕ್ಕೂ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಬಸ್ ನಿಲ್ದಾಣದ ಎದುರು ಫ್ಲೈಓವರ್ ಬರುವುದರಿಂದ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ, ಜನರ ಓಡಾಟದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಿಲ್ದಾಣದ ಸಾಕಷ್ಟು ತಾಂತ್ರಿಕತೆಯಿಂದ ಕೂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ, ಸಾರಿಗೆ ಸಂಸ್ಥೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ ಈ ಬಗ್ಗೆ ಪ್ರಾಯೋಗಿಕ ಓಡಾಟ ನಡೆಸಿ ನ್ಯೂನತೆ ಸರಿಪಡಿಸಿ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.ಕಳಪೆ ಕಾಮಗಾರಿ ಆರೋಪದ ಮಧ್ಯೆಯೂ ಯೋಜನೆಗಳ ಹಸ್ತಾಂತರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಹಸ್ತಾಂತರ ಪ್ರಕ್ರಿಯೆಯಲ್ಲಿ ಪೆಂಡಿಂಗ್ ಉಳಿದಿದ್ದವು. ಆದರೆ ಸರ್ಕಾರದ ಸೂಚನೆ ಮೇರೆಗೆ ಪಾಲಿಕೆಯು ಸ್ಮಾರ್ಟ್‌ಸಿಟಿಯ ಕೆಲವು ಯೋಜನೆಗಳನ್ನು ಹಸ್ತಾಂತರ ಮಾಡಿಕೊಂಡಿದೆ. ಯೋಜನೆಯ ಅನುಷ್ಠಾನದಲ್ಲಿ ಉಂಟಾಗುತ್ತಿದ್ದ ವ್ಯತ್ಯಾಸ ಸರಿಪಡಿಸಲು ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ ಎರಡನೇ ದೊಡ್ಡ ನಗರವನ್ನು ತಗ್ಗು-ಗುಂಡಿ ಹಾಗೂ ಧೂಳು ಮುಕ್ತ ನಗರವನ್ನಾಗಿಸಲು ಶ್ರಮಿಸಲಾಗುತ್ತಿದೆ. ಕೇಂದ್ರದಿಂದ ಅನುದಾನ ತಂದು ಹತ್ತಾರು ಕಾಮಗಾರಿ ಸಹ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ, ಸ್ಮಾರ್ಟ್‌ಸಿಟಿ ಅಧೀಕ್ಷಕ ಎಂಜಿನಿಯರ್ ಶ್ರೀನಿವಾಸ ಪಾಟೀಲ, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ ಸೇರಿದಂತೆ ಇತರರು ಇದ್ದರು.ಕಾಮಗಾರಿ ವಿಳಂಬಕ್ಕೆ ₹ 22 ಲಕ್ಷ ದಂಡ: ಗಾಳಿಹಳೇಬಸ್ ನಿಲ್ದಾಣ ಕಾಮಗಾರಿ ವಿಳಂಭವಾದ ಹಿನ್ನಲೆಯಲ್ಲಿ ಹಂತ-ಹಂತವಾಗಿ ಒಟ್ಟು ₹ 22 ಲಕ್ಷ ದಂಡ ವಿಧಿಸಲಾಗಿದೆ. ಸದ್ಯ ನಿರಂತರವಾಗಿ ಸುರಿದ ಮಳೆಯಿಂದಾಗಿ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಕ್ಸ್‌ಲೇಟರ್, ಲಿಫ್ಟ್ ಅವಳವಡಿಕೆಗೆ ಪರವಾನಗಿ ಪಡೆಯಲು ವಿಳಂಬವಾಗಿದೆ. ಈಗಾಗಲೇ ಶೇ. 85ರಷ್ಟುಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟಂಬರ್ ಅಂತ್ಯದೊಳಗಾಗಿ ಎಲ್ಲವೂ ಪೂರ್ಣಗೊಳಿಸಲಾಗುವುದು. ಮೊದಲಿಗೆ ಇದ್ದ ಶೇ.12ರಷ್ಟು ಜಿಎಸ್‌ಟಿ ಶೇ. 18ರಷ್ಟು ಏರಿಕೆಯಾಗಿದೆ. ಅಲ್ಲದೇ, ನಿಲ್ದಾಣದಲ್ಲಿ ಹೊಸದಾಗಿ ಎಕ್ಸ್‌ಲೇಟರ್, ಲಿಫ್ಟ್ ಅಳವಡಿಕೆ, ಹಿಂಬದಿಯ ರಸ್ತೆ ನಿರ್ಮಾಣಕ್ಕೆ ಯೋಜಿಸಿದ ಹಿನ್ನೆಲೆಯಲ್ಲಿ ಯೋಜನಾ ವೆಚ್ಚ ₹ 50.58 ಕೋಟಿಗೆ ಏರಿಕೆ ಆಗಿದೆ. ಈ ಮೊದಲು ₹ 40 ಕೋಟಿ ಇತ್ತು ಎಂದು ಸ್ಮಾರ್ಟ್‌ಸಿಟಿ ಎಂಡಿ ರುದ್ರೇಶ ಗಾಳಿ ಮಾಹಿತಿ ನೀಡಿದರು.