ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯದ ಹಳೆಯ ಕ್ರಸ್ಟ್ ಗೇಟ್‌ಗಳನ್ನು ಬದಲಿಸಿ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ತೆರವುಗೊಳಿಸಿರುವ ಹಳೆಯ ಕಬ್ಬಿಣದ ಕ್ರಸ್ಟ್ ಗೇಟ್‌ಗಳನ್ನು ಪ್ರತಿ ಕೆಜಿಗೆ 6 ರು.ನಂತೆ ಮಾರಾಟ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.ಚೆನ್ನೈ ಮತ್ತು ಬೆಂಗಳೂರಿನ ಮಾರುಕಟ್ಟೆ ದರ ಪ್ರತಿ ಕೆಜಿ ಕಬ್ಬಿಣಕ್ಕೆ 45 ರು.ನಿಂದ 55 ರು.ವರೆಗೆ ಇದೆ. ಹಳೆಯದಾಗಿರುವ ಕ್ರಸ್ಟ್‌ಗೇಟ್‌ಗಳನ್ನು ಪ್ರತಿ ಕೆಜಿಗೆ 6 ರು.ನಂತೆ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಅಣೆಕಟ್ಟೆಯ ನೀರಿನ ಹರಿವನ್ನು ನಿರ್ವಹಣೆ ಮಾಡಲು 608 ಟನ್ ತೂಕದ 150 ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿತ್ತು. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ಕ್ರಸ್ಟ್ ಗೇಟ್‌ಗಳನ್ನು ಅಂದೇ ಮಹಾರಾಜರು ಅಳವಡಿಸಿದ್ದರು. ಇತ್ತೀಚೆಗೆ ಸುಮಾರು 90 ವರ್ಷಗಳಷ್ಟು ಹಳೆಯದಾದ ಕ್ರಸ್ಟ್‌ಗೇಟ್‌ಗಳನ್ನು ಹಂತ ಹಂತವಾಗಿ ಬದಲಾವಣೆ ಮಾಡಲಾಗಿತ್ತು. ಈ ಹಳೆಯ ಕ್ರಸ್ಟ್ ಗೇಟ್‌ಗಳನ್ನು ಪ್ರತಿ ಕೆ.ಜಿ.ಗೆ 6 ರು.ಗಳಂತೆ ಕೇವಲ 32 ಲಕ್ಷ ರು.ಗಳಿಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಆರೋಪಿಸಿದರು.ಪ್ರತಿ ಕೆಜಿ ಕಬ್ಬಿಣದ ಇಂದಿನ ಮಾರುಕಟ್ಟೆ ದರ ಪ್ರತಿ ಕೆ.ಜಿ.ಗೆ 45 ರಿಂದ 55 ರು. ಇದ್ದರೂ 6 ರು. ಕನಿಷ್ಠ ಬೆಲೆಗೆ ಮಾರುವುದಕ್ಕೆ ಸರ್ಕಾರ ಮುಂದಾಗಿರುವ ಅವಶ್ಯಕತೆಯಾದರೂ ಏನು. ಇದರ ಹಿಂದೆ ಅಡಗಿರುವ ಹುನ್ನಾರವೇನು ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ತುಂಗಭದ್ರಾ ಡ್ಯಾಂನಲ್ಲಿ ನೀರಿನ ಒತ್ತಡ ತಾಳಲಾರದೆ ಕ್ರಸ್ಟ್‌ಗೇಟೊಂದು ನೀರಿನಲ್ಲಿ ಕೊಚ್ಚಿಹೋಗಿ ಅಪಾರ ಪ್ರಮಾಣದ ನೀರು ಸಮುದ್ರದ ಪಾಲಾಗಿತ್ತು. ಇಂತಹ ಅವಘಡಗಳು ಸಂಭವಿಸಿದಾಗ ಅಥವಾ ಹಾಲಿ ಕೆಆರ್‌ಎಸ್‌ನಲ್ಲಿ ಅಳವಡಿಸಿರುವ ಕ್ರಸ್ಟ್‌ಗೇಟ್‌ಗಳಿಗೆ ದಿಢೀರನೇ ತೊಂದರೆ ಎದುರಾದಾಗ ಹಳೆಯ ಗೇಟ್‌ಗಳನ್ನೇ ತಾತ್ಕಾಲಿಕವಾಗಿ ಅಳವಡಿಸಿ ನೀರಿನ ಪೋಲಾಗುವುದನ್ನು ತಪ್ಪಿಸಬಹದು. ಆದ್ದರಿಂದ ಹಳೆಯ ಕ್ರಸ್ಟ್ ಗೇಟ್‌ಗಳನ್ನು ಮಾರಾಟ ಮಾಡದೆ ಕೆ.ಆರ್.ಎಸ್. ಸಂಶೋಧನಾ ಕೇಂದ್ರದಲ್ಲಿ ಅವುಗಳನ್ನು ಇಟ್ಟುಕೊಂಡು ಕಾಪಾಡುವಂತೆ ಮನವಿ ಮಾಡಿದ್ದಾರೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಅಳವಡಿಸಲಾಗಿದ್ದ ಕ್ರಸ್ಟ್ ಗೇಟ್‌ಗಳು ಪಾರಂಪರಿಕ ವಸ್ತುಗಳ ಸಾಲಿಗೆ ಸೇರುತ್ತವೆ. ಆದ್ದರಿಂದ ಅವುಗಳನ್ನು ಸಂರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇಂತಹ ಕ್ರಸ್ಟ್ ಗೇಟ್‌ಗಳನ್ನು ಪ್ರತಿ ಕೆಜಿಗೆ ಕೇವಲ 6 ರು.ಗಳಿಗೆ ಮಾರಾಟ ಮಾಡಿಕೊಳ್ಳುವಂತಹ ಸ್ಥಿತಿಗೆ ಸರ್ಕಾರ ಇಳಿದಿರುವುದು ದುರಂತ ಎಂದಿದ್ದಾರೆ.
ಕ್ರಸ್ಟ್‌ಗೇಟ್‌ಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದೆ ಅವುಗಳನ್ನು ಸಂರಕ್ಷಿಸಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಹೊಸಹಳ್ಳಿ ಶಿವು, ಹೊಸಹಳ್ಳಿ ಮಂಜುನಾಥ್, ರಘು, ನಂದೀಶ್, ಬಿ.ಟಿ. ಶಿವಲಿಂಗಯ್ಯ, ಸಿ.ಎಂ. ಜವರೇಗೌಡ, ಆನಂದ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.