ಉಪರಾಷ್ಟ್ರಪತಿ ಸ್ವಾಗತಕ್ಕೆ ನಿಂತ ರಾಜಕೀಯ ಹಳೇ ದೋಸ್ತಿಗಳು..!

| Published : Nov 10 2025, 12:45 AM IST

ಉಪರಾಷ್ಟ್ರಪತಿ ಸ್ವಾಗತಕ್ಕೆ ನಿಂತ ರಾಜಕೀಯ ಹಳೇ ದೋಸ್ತಿಗಳು..!
Share this Article
  • FB
  • TW
  • Linkdin
  • Email

ಸಾರಾಂಶ

ಉಪರಾಷ್ಟ್ರಪತಿಗಳೊಂದಿಗೆ ಇದ್ದಷ್ಟು ಹೊತ್ತು ಕೂಡ ಒಬ್ಬರ ಮುಖವನ್ನೊಬ್ಬರು ನೋಡುವುದಕ್ಕೂ ಇಚ್ಛಿಸಲಿಲ್ಲ. ಒಂದು ಮಾತನ್ನೂ ಕೂಡ ಆಡದೆ ಪರಸ್ಪರರು ನಿರ್ಗಮಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಳೆಯ ದೋಸ್ತಿಗಳು ಹಾಗೂ ನಂತರದ ರಾಜಕೀಯ ಬದ್ಧ ವೈರಿಗಳಾಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಉಪರಾಷ್ಟ್ರಪತಿಗಳ ಸ್ವಾಗತಕ್ಕೆ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನಸೆಳೆಯಿತು.

ಭಾನುವಾರ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದ ಕಾರಣ ಅವರ ಸ್ವಾಗತಕ್ಕೆ ಇಬ್ಬರೂ ನಾಯಕರು ಕಾದುನಿಂತಿದ್ದರು.

ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಉಪರಾಷ್ಟ್ರಪತಿಗಳಿಗೆ ಮೊದಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತ ಕೋರಿದರು. ಇದೇ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಹಾಜರಿದ್ದರು.

ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎನ್‌.ಚಲುವರಾಯಸ್ವಾಮಿ ಅವರು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರೊಂದಿಗೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಅವರು ಪೂಜೆ ಸಲ್ಲಿಸುವಾಗಲೂ ಜೊತೆಯಾಗಿ ನಿಂತಿದ್ದರು. ಉಪರಾಷ್ಟ್ರಪತಿಗಳಿಗೆ ಸಾಂಪ್ರದಾಯಿಕವಾಗಿ ದೇವಾಲಯದ ವತಿಯಿಂದ ಅಭಿನಂದಿಸಿ, ಪ್ರಸಾದ ನೀಡಲಾಯಿತು.

ಬಳಿಕ ಅವರನ್ನು ಇಬ್ಬರೂ ಪ್ರಮುಖ ನಾಯಕರು ದೇವಸ್ಥಾನದಿಂದ ಹೆಲಿಪ್ಯಾಡ್‌ವರೆಗೆ ಬೀಳ್ಕೊಟ್ಟು ಮತ್ತೆ ಅಲ್ಲಿಂದ ಇಬ್ಬರೂ ಪ್ರತ್ಯೇಕವಾಗಿ ವಾಪಸ್‌ ತೆರಳಿದರು. ಉಪರಾಷ್ಟ್ರಪತಿಗಳೊಂದಿಗೆ ಇದ್ದಷ್ಟು ಹೊತ್ತು ಕೂಡ ಒಬ್ಬರ ಮುಖವನ್ನೊಬ್ಬರು ನೋಡುವುದಕ್ಕೂ ಇಚ್ಛಿಸಲಿಲ್ಲ. ಒಂದು ಮಾತನ್ನೂ ಕೂಡ ಆಡದೆ ಪರಸ್ಪರರು ನಿರ್ಗಮಿಸಿದರು.

ಇಂದು ನಾಗಮಂಗಲಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ

ನಾಗಮಂಗಲ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನ.10ರಂದು ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ‌ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 9.30ಕ್ಕೆ ತಾಲೂಕಿನ ಬಚ್ಚಿಕೊಪ್ಪಲು ಗ್ರಾಮದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಮಣ್ಣಹಳ್ಳಿ ಗ್ರಾಮದ ಸಮೀಪ 9.5 ಎಕರೆ ಪ್ರದೇಶದಲ್ಲಿ ವಾಹನ ಚಾಲನಾ ತರಬೇತಿ ಕೇಂದ್ರ (ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್) ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು.

ಬೆಳಗ್ಗೆ 10.30ಕ್ಕೆ ಪಟ್ಟಣದಲ್ಲಿ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ನೂತನ ಕಟ್ಟಡ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು.

ಸಂಜೆ 4 ಗಂಟೆಗೆ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗ ಮತ್ತು ಚೆಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವರು.