ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಳೆಯ ವಿಶ್ವ ವಿದ್ಯಾಲಯಗಳು ಪಿಂಚಣಿ ಸೇರಿದಂತೆ ಅನೇಕ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಶೇ. 70ರಷ್ಟು ಪಿಂಚಣಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು.

ಇಲ್ಲಿಯ ಗಾಂಧಿ ಭವನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಬಿಕಾಂ, ಲಾಜಿಸ್ಟಿಕ್ಸ್ ವಿದ್ಯಾರ್ಥಿಗಳಿಗೆ ಹೊರ ದೇಶಗಳಿಗೆ ಕಳುಸುವ ಯೋಜನೆ ಹಾಕಿ ಹಾಕಿಕೊಂಡಿದ್ದೇವೆ. ಜೂನ್ ತಿಂಗಳಲ್ಲಿ ಸ್ಕೌಟ್ ಯೋಜನೆ ಅಡಿಯಲ್ಲಿ ಈ ವಿದ್ಯಾರ್ಥಿಗಳನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುವುದು ಎಂದರು.

ಶಿಷ್ಯವೇತನ:

ಸರ್ಕಾರಿ ಹೈಸ್ಕೂಲ್ ಹಾಗೂ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿನಿಯರ ಪದವಿ ಓದಿಗಾಗಿ ವಾರ್ಷಿಕ ₹ 30 ಸಾವಿರ ಶಿಷ್ಯವೇತನವನ್ನು ಅಜೀಂ ಪ್ರೇಮಜಿ ಫೌಂಡೇಶನ್ ಸಹಕಾರದಿಂದ ನೀಡಲು ಯೋಜನೆ ರೂಪಿಸಲಾಗಿದೆ. 36 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲು ಫೌಂಡೇಶನ್ ಒಪ್ಪಿಕೊಂಡಿದ್ದು, ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸರ್ಕಾರ ಈ ಶಿಷ್ಯವೇತನ ನೀಡಲಿದೆ. ಈ ರೀತಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.


ಇದೇ ವೇಳೆ 270 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಈ ಪೈಕಿ 113 ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಸುವರ್ಣ ಪದಕ ಪಡೆದರೆ, 78 ವಿದ್ಯಾರ್ಥಿಗಳು ಶಿಷ್ಯವೇತನ ಪಡೆದರು. 69 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದರೆ, 252 ಸಂಶೋಧಕರು ಪಿಎಚ್‌ಡಿ ಪದವಿ ಪಡೆದರು. ಡಾ. ಡಿ.ಸಿ. ಪಾವಟೆ ಡೈಮಂಡ್ ಜ್ಯೂಬಿಲಿ ಶಿಷ್ಯವೇತನ ಮತ್ತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಶಿಷ್ಯವೇತನ, ಪಾರಿತೋಷಕ ಪ್ರದಾನ ಮಾಡಲಾಯಿತು.

ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಸ್ವಾಗತಿಸಿದರು. ಕವಿವಿ ಕುಲಸಚಿವ ಶಂಕ್ರಪ್ಪ ವಣಿಕ್ಯಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಎಲ್ಲ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.ಚಿನ್ನದ ಪದಕಕ್ಕೆ ಮುತ್ತಿಟ್ಟವರು

ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ಶ್ವೇತಾ ಭಟ್ ಬಿಎಸ್ಸಿ ಪದವಿಯಲ್ಲಿ 7, ಅಂಕೋಲಾದ ಕೆಎಲ್‌ಇ ಬಿಇಡಿ ಕಾಲೇಜಿನ ಸುಲಕ್ಷಾ ನಾಯ್ಕ ಬಿಇಡಿ ಪದವಿಯಲ್ಲಿ 5, ಭಟ್ಕಳ ಅಂಜುಮನ್ ಕಾಲೇಜಿನ ಶ್ರೇಯಾಸ್ ಸ್ನಾತಕೋತ್ತರ ಕನ್ನಡ ವಿಷಯದಲ್ಲಿ ಒಟ್ಟು 11 ಚಿನ್ನದ ಪದಕ ಪಡೆದರು. ಕವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಆದಿತ್ಯ ಯಲಿಗಾರಗೆ 11 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಕವಿವಿ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗದ ಪ್ರಣವ್ ಕರ್ಜಿಗಿಮಠ 7, ಸಮಾಜಶಾಸ್ತ್ರ ವಿಷಯದಲ್ಲಿ ಸಮೀನಾ ಕರ್ನೂಲ್ 7, ಗಣಿತಶಾಸ್ತ್ರದಲ್ಲಿ ಸಿಂಧು ಸುರೇಬಾನ 10, ರಸಾಯನಶಾಸ್ತ್ರದಲ್ಲಿ ನಮೃತಾ ಸಿನ್ನೂರ 9, ಇದೇ ವಿಷಯದಲ್ಲಿ ವೈಭವಿ ಪಂಡಿತ 5, ಪ್ರಾಣಿಶಾಸ್ತ್ರ ವಿಷಯದಲ್ಲಿ ತ್ಯಾಯಿನಿ 8, ಭೂಗೋಳಶಾಸ್ತ್ರದಲ್ಲಿ ಪ್ರೀತಿ ರಾಣಿ 8 ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಮಾಲಾ ಮಾಡಳ್ಳಿ 8 ಚಿನ್ನದ ಪದಕ ಕೊರಳಿಗೇರಿಸಿಕೊಂಡರು.