ಸಾರಾಂಶ
ಹಳೇಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಐಎಂಐಎಂ ಸದಸ್ಯೆ ಪತಿ ಸೇರಿದಂತೆ ಇಬ್ಬರಿಗೆ ಸೋಮವಾರ ಸುಪ್ರಿಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹಳೇಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಐಎಂಐಎಂ ಸದಸ್ಯೆ ಪತಿ ಸೇರಿದಂತೆ ಇಬ್ಬರಿಗೆ ಸೋಮವಾರ ಸುಪ್ರಿಂಕೋರ್ಟ್ ಜಾಮೀನು ಮಂಜೂರು ಮಾಡಿದೆ.ಇದರಿಂದ ಈ ವರೆಗೆ ಜಾಮೀನು ಪಡೆದವರ ಸಂಖ್ಯೆ 11ಕ್ಕೆ ಏರಿದಂತಾಗಿದೆ.
ಪಾಲಿಕೆ ಸದಸ್ಯೆ ಹುಸೇನಬಿ ನಾಲವತ್ತವಾಡ ಅವರ ಪತಿ ಇರ್ಫಾನ್ ನಾಲವತ್ತವಾಡ ಹಾಗೂ ಸಿಕಂದರ ಎಂಬುವರಿಗೆ ಸೋಮವಾರ ಜಾಮೀನು ದೊರೆತಿದೆ ಎಂದು ಮೂಲಗಳು ತಿಳಿಸಿವೆ.2022 ಏಪ್ರಿಲ್ 16 ರಂದು ರಾತ್ರಿ ವಿವಾದಾತ್ಮಕ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 156 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಸೇರಿದಂತೆ 9 ಜನರಿಗೆ ಜಾಮೀನು ದೊರೆತಿತ್ತು.
ಇದೇ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ಅವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯಲು ಪರಿಶೀಲಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.