ಒಲಿಂಪಿಕ್ಸ್‌ ಪದಕ ಗೆದ್ದರೆ 6 ಕೋಟಿ ರು. ಬಹುಮಾನ

| Published : Feb 17 2024, 01:16 AM IST

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 6 ಕೋಟಿ, ಬೆಳ್ಳಿ ವಿಜೇತರಿಗೆ 4 ಕೋಟಿ ಬಹುಮಾನ ನೀಡಲಾಗುವುದು. ಬೆಂಗಳೂರಿನ 70 ಎಕರೆಯಲ್ಲಿ ಕ್ರೀಡಾ ನಗರ ಸ್ಥಾಪನೆ ಮಾಡಲಾಗುವುದು. ನಾಲ್ಕು ಸ್ಥಳದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಪ್ರತಿ ವರ್ಷ ರಾಜ್ಯ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡಲಾಗುವುದು. ಕ್ರೀಡಾಪಟುಗಳಿಗೆ ಪೊಲೀಸ್‌/ಅರಣ್ಯ ಇಲಾಖೆ ನೇಮಕಾತಿಯಲ್ಲಿ ಶೇ.2 ಹುದ್ದೆ ಮೀಸಲು ಮಾಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕ್ರೀಡಾ ನಗರ, ಕ್ರೀಡಾ ಸಂಕೀರ್ಣ, ಕ್ರೀಡಾ ವಸತಿ ನಿಲಯ ಮತ್ತು ಒಲಿಂಪಿಕ್ಸ್‌ ಕೂಟಗಳ ಆಯೋಜನೆ ಸೇರಿದಂತೆ ಕ್ರೀಡಾಪಟುಗಳು ಮತ್ತು ಕ್ರೀಡೆಗಳನ್ನು ಪೋತ್ಸಾಹಿಸಲು ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿದೆ. ಜತೆಗೆ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಪಡೆಯುವ ಕ್ರಿಡಾಪಟುಗಳಿಗೆ ಭಾರೀ ನಗದು ಬಹುಮಾನ ಮತ್ತು ಗಾಯಗೊಂಡ ಕ್ರೀಡಾಪಟುಗಳಿಗೆ ಚಿಕಿತ್ಸೆ ಕಲ್ಪಿಸಲು ಆರೋಗ್ಯ ವಿಮೆ ಯೋಜನೆ ಪ್ರಕಟಿಸಿದೆ.ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ 70 ಎಕರೆ ಜಾಗದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಒಳಗೊಂಡ ‘ಕ್ರೀಡಾ ನಗರ’ವನ್ನು ಮತ್ತು ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಬಹುಕ್ರೀಡಾ ಸೌಲಭ್ಯಗಳನ್ನೊಳಗೊಂಡ ‘ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರು. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ, 5 ಕೋಟಿ ರು. ವೆಚ್ಚದಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ, 10 ಕೋಟಿ ರು. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ, ಕ್ರೀಡಾ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ.ಒಲಿಂಪಿಕ್ಸ್‌ ಕೂಟ ಆಯೋಜನೆ:ರಾಜ್ಯದಲ್ಲಿ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರೈಫಲ್‌ ಶೂಟಿಂಗ್‌, ಹಾಕಿ ಕರ್ನಾಟಕ, ಅಮೆಚ್ಯೂರ್‌ ಬಾಕ್ಸಿಂಗ್‌, ಆರ್ಚರಿ, ಅಥ್ಲೆಟಿಕ್ಸ್‌, ಫೆನ್ಸಿಂಗ್‌ ಅಸೋಸಿಯೇಷನ್‌ಗಳಿಗೆ ಮತ್ತು ಕಯಾಕಿಂಗ್ ಹಾಗೂ ಕ್ಯಾನೋಯಿಂಗ್ ಅಕಾಡೆಮಿಗೆ ಒಟ್ಟಾರೆ 12 ಕೋಟಿ ರು. ಅನುದಾನ ನೀಡಲಾಗಿದೆ. ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತಿ ವರ್ಷ ಒಂದು ರಾಜ್ಯ ಮಟ್ಟದ ‘ಒಲಿಂಪಿಕ್ಸ್ ’ ಮತ್ತು 14 ವರ್ಷದೊಳಗಿನವರಿಗೆ ‘ಮಿನಿ ಒಲಿಂಪಿಕ್ಸ್‌’ ಆಯೋಜಿಸಲು ಉದ್ದೇಶಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಕ್ರೀಡಾಪಟುಗಳಿಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ.2ರಷ್ಟು ಹುದ್ದೆಗಳನ್ನು ಮೀಸಲಿಟ್ಟಿದೆ. ಪದಕ ಗೆದ್ದರೆ 6 ಕೋಟಿ ರು. ಬಹುಮಾನ:ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ, ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 3 ಕೋಟಿ ರು. ಏಷ್ಯನ್‌ ಮತ್ತು ಕಾಮನ್ವವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಪದಕ ವಿಜೇತ ಕ್ರೀಡಾಪಟುಗಳಿ ಕ್ರಮವಾಗಿ 35, 25 ಮತ್ತು 15 ಲಕ್ಷ ರು. ಪ್ರೋತ್ಸಾಹಧನ ಘೋಷಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಮಯದಲ್ಲಿ ಗಾಯಗೊಂಡ ಕ್ರೀಡಾಪಟುಗಳಿಗೆ ಚಿಕಿತ್ಸೆಗೆ ನೆರವಾಗಲು ‘ಆರೋಗ್ಯ ವಿಮೆ’ ಸೌಲಭ್ಯ ಸಹ ಘೋಷಿಸಲಾಗಿದೆ.