10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಜಾಗ್ರತೆಯಿಂದ ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದ್ದರೂ ಕೂಡ ತಾಲೂಕಿನ ಶಾಗ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್. ಮಹಾದೇವ ಪರೀಕ್ಷಾ ದಿನ ಕರ್ತವ್ಯ ಲೋಪ ಎಸಗಿದ್ದಾರೆ.
ಕನ್ನಡ್ರಭ ವಾರ್ತೆ ಕೊಳ್ಳೇಗಾಲ
10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಜಾಗ್ರತೆಯಿಂದ ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದ್ದರೂ ಕೂಡ ತಾಲೂಕಿನ ಶಾಗ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್. ಮಹಾದೇವ ಪರೀಕ್ಷಾ ದಿನ ಕರ್ತವ್ಯ ಲೋಪ ಎಸಗಿದ್ದಾರೆ. ಇಲಾಖೆ ನಿಯಮ ಮರೆಮಾಚಿ 2 ಗಂಟೆ ವಿಳಂಬವಾಗಿ 12 ಗಂಟೆ ಸಮಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇಲಾಖೆಗೆ ತಪ್ಪು ಮಾಹಿತಿ ರವಾನಿಸಿದ್ದಾರೆ ಎನ್ನಲಾಗುತ್ತಿದೆ.ಏನಿದು ಪ್ರಕರಣ?:ಪೂರ್ವ ಸಿದ್ಧತಾ ಪರೀಕ್ಷೆಯ ಹೊಣೆಯನ್ನು ಮುಖ್ಯಶಿಕ್ಷಕರೆ ಹೊರಬೇಕು. ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಸ್ತುನಿಷ್ಟವಾಗಿ ಪರೀಕ್ಷೆ ನಡೆಸಲು ಕ್ರಮವಹಿಸುವಂತೆ ಚಾಮರಾಜನಗರ ಉಪನಿರ್ದೇಶಕರು ಎಲ್ಲಾ ಮುಖ್ಯಶಿಕ್ಷಕರಿಗೆ ಸೂಚಿಸಿದ್ದಾರೆ. ಆದರೆ ಶಾಗ್ಯ ಶಾಲೆಯ ಮುಖ್ಯಶಿಕ್ಷಕ ಎನ್. ಮಹಾದೇವ ಜ.5ರಂದು ಪೂರ್ವ ಸಿದ್ಧತಾ ಪರೀಕ್ಷೆ ದಿನ ತಮ್ಮ ಲಾಗಿನ್ ಪ್ರಶ್ನೆ ಪತ್ರಿಕೆಯನ್ನು ಮತ್ತೊಬ್ಬ ಶಿಕ್ಷಕ ಬಿ. ಮಹದೇವ್ ವ್ಯಾಟ್ಯಾಪ್ ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಕಳುಹಿಸಿಸಿದ್ದಾರೆ. ಅಲ್ಲದೆ ಸಹಶಿಕ್ಷಕರೊಬ್ಬರಿಗೆ ನೀವು ಪರೀಕ್ಷೆ ವೇಳೆ ಲೋಪ ಎಸಗಿದ್ದೀರಿ. ಮುಖ್ಯ ಶಿಕ್ಷಕರ ಸೂಚನೆ ಪಾಲಿಸಿಲ್ಲ ಎಂದು ತಮ್ಮ ತಪ್ಪು ಮರೆಮಾಚಲು ಹೋಗಿ
ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ ನಾನೇ ಶಿಸ್ತು ಕ್ರಮಕೈಗೊಳ್ಳುವ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.5ರಂದು ನೋಟಿಸ್, 3 ದಿನದಲ್ಲಿ ಸಮಜಾಯಿಸಿಗೆ ತಾಕೀತು:
ಮುಖ್ಯಶಿಕ್ಷಕ ಶಾಗ್ಯ ಶಾಲೆಯ ಸಹ ಶಿಕ್ಷಕಗೆ ಜ.5ರಂದು ದಿನಾಂಕ ನಮೂದಿಸಿ 6ರಂದು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು 3 ದಿನದಲ್ಲಿ ಸಮಜಾಯಿಸಿ ನೀಡದಿದ್ದರೆ ನಿಮ್ಮ ವಿರುದ್ದ ಕೆ ಸಿ ಎಸ್ ಆರ್ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ನೀಡುವ ನೋಟಿಸ್ ಮಾದರಿಯಲ್ಲಿಯೇ ಇವರು ನಿಯಮ ಉಲ್ಲಂಘಿಸಿ ನೋಟಿಸ್ ಜಾರಿ ಮಾಡಿದ್ದಾರೆ.ನೋಟಿಸ್‌ನಲ್ಲಿ ಏನಿದೆ?:
ಬಿ. ಮಹಾದೇವ್ ಆದ ನೀವು ಅಕ್ಷರ ದಾಸೋಹದ ರಶೀತಿ ನೀಡಿಲ್ಲ, ಶಾಲೆಯ ಭೌತಿಕ ವಹಿಚಾರ್ಜ್ ನೀಡಿಲ್ಲ, ಶಿಕ್ಷಕರ ಸಭೆ ಹಾಗೂ ಶಿಕ್ಷಕರ ಸಭಾ ನಡಾವಳಿ ಅನುಸಾರವಾಗಿ ನೀವು ಸಭೆಗಳಲ್ಲಿ ಹಿರಿಯ ಶಿಕ್ಷಕರಾದ ಹಿನ್ನೆಲೆ ಪರೀಕ್ಷಾ ವಿಭಾಗದ ಜವಾಬ್ದಾರಿ ವಹಿಸಿ, ಮುಖ್ಯಸ್ಥರನ್ನಾಗಿ ಜವಾಬ್ದಾರಿ ನೀಡಲಾಗಿದೆ. ನೀವು ಒಪ್ಪಿಕೊಂಡು ನಿರ್ಣಯಿಸಿದ್ದಿರುವುದು ಸರಿಯಷ್ಟೇ, ಆದರೆ 10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ- 1ರ ವೇಳೆ ಪ್ರಶ್ನೆ ಪತ್ರಿಕೆಯನ್ನು ಸರಿಯಾದ ಸಮಯಕ್ಕೆ ನೀಡದೆ, ವಿಳಂಬ ನೀತಿ ಅನುಸರಿಸಿ ಪರೀಕ್ಷಾ ನಿಯಮ ಪಾಲಿಸದೆ ಇರುವುದು ಕಂಡು ಬಂದಿದೆ. 3 ದಿನದೊಳಗೆ ಸಮಜಾಯಿಸಿ ನೀಡದಿದ್ದರೆ ಕೆ ಸಿ ಎಸ್ ಆರ್ ನಿಯಮದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಿದ್ದಾರೆ.ಶಾಗ್ಯ ಪ್ರೌಢಶಾಲೆಗೆ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಳುಹಿಸಿ ಈ ಸಂಬಂಧ ವರದಿ ತರಿಸಿಕೊಳ್ಳುವೆ. ಮುಖ್ಯಶಿಕ್ಷಕರೇ ಪೂರ್ವ ಸಿದ್ಧತಾ ಪರೀಕ್ಷೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಅವರೇ ಪರೀಕ್ಷೆ ವೇಳೆ ಲೋಪ ಮಾಡಿರುವುದು, ಮತ್ತೊಬ್ಬ ಶಿಕ್ಷಕರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ, ಇಲ್ಲಿ ಲೋಪವಾಗಿದ್ದರೆ ಪರಿಶೀಲಿಸಿ ಕ್ರಮವಹಿಸಲಾಗುವುದು.
ಚಂದ್ರಪಾಟೀಲ್, ಉಪನಿರ್ದೇಶಕ ಚಾಮರಾಜನಗರ