ಸಂಡೂರು: ಸಂಸದ ಈ.ತುಕಾರಾಮ್ ಬುಧವಾರ ತಾಲೂಕಿನ ಬನ್ನಿಹಟ್ಟಿಯಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಯುಕ್ತ ಖನಿಜ ತನಿಖಾ ಠಾಣೆಗೆ (ಚೆಕ್ ಪೋಸ್ಟ್) ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಲ್ಲಿ ಹಲವು ರೀತಿಯ ಲೋಪಗಳು ಕಂಡು ಬಂದವು. ಅಲ್ಲಿನ ಅವ್ಯವಸ್ಥೆ ಕುರಿತು ಸಂಸದರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಖನಿಜ ತನಿಖಾ ಠಾಣೆಯಲ್ಲಿ ಕಂಡು ಬಂದ ಲೋಪಗಳು: ೨೦೧೭-೧೮ರಲ್ಲಿ ಆರಂಭವಾದ ಇಲ್ಲಿನ ತನಿಖಾ ಠಾಣೆಯಲ್ಲಿ ಅದಿರನ್ನು ಹೊತ್ತು ತರುವ ಲಾರಿಗಳನ್ನು ಮತ್ತು ಅದರಲ್ಲಿನ ಅದಿರಿನ ತೂಕ ಮಾಡಲು ನಾಲ್ಕು ಕಾಟಾಗಳಿದ್ದು, ಅವುಗಳಲ್ಲಿ ಇದೀಗ ಒಂದು ಮಾತ್ರ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆ. ಇನ್ನುಳಿದ ಮೂರು ತೂಕದ ಮಾಪಕಗಳಲ್ಲಿ (ಕಾಟಾಗಳು) ವ್ಯವಸ್ಥೆ ಸರಿ ಇಲ್ಲದ ಕಾರಣ, ಅಲ್ಲಿ ವಾಹನಗಳ ತೂಕವನ್ನು ಮಾಪನ ಮಾಡದಂತೆ ತೂಕ ಮತ್ತು ಅಳತೆ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಅವುಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. ಸ್ಥಗಿತಗೊಳಿಸಿರುವ ಕಾಟಾಗಳ ಮೂಲಕವೂ ವಾಹನಗಳು ಕೇವಲ ಸೀಲನ್ನು ಹಾಕಿಸಿಕೊಂಡು ಮುಂದೆ ಸಾಗುತ್ತಿವೆ.

ಹಲವು ಲಾರಿಗಳು ಕಾಟಾದಿಂದ ದೂರದಲ್ಲಿ ನಿಂತುಕೊಳ್ಳುತ್ತವೆ. ಲಾರಿಯವರು ಪರ್ಮಿಟ್ ಲೆಟರ್ ತಂದು ಅದಕ್ಕೆ ಸೀಲನ್ನು ಹಾಕಿಸಿಕೊಂಡು ತೂಕ ಮಾಡಿಸದೆ, ತಮ್ಮ ಅದಿರು ತುಂಬಿದ ಲಾರಿಗಳನ್ನು ಕಾರ್ಖಾನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಮಾತು ಈ ಸಂದರ್ಭದಲ್ಲಿ ಸ್ಥಳೀಯರಿಂದ ಕೇಳಿಬಂತು.

ಮುಖ್ಯಮಂತ್ರಿ ಆದೇಶ ಕಡೆಗಣಿಸಿದ ಆಡಳಿತ:

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗಾಗಿ ಖಾಸಗಿ ನೌಕರರನ್ನು ನೇಮಿಸಲಾಗಿದೆ. ಇದು ಅಕ್ರಮ ಎಸಗಲು ಅವಕಾಶ ನೀಡಲಿದೆ. ಕೂಡಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖಾಯಂ ನೌಕರರನ್ನು ತಪಾಸಣೆಗೆ ನೇಮಕ ಮಾಡುವಂತೆ ೨೦೨೩ರಲ್ಲಿ ಮುಖ್ಯಮಂತ್ರಿ ಪತ್ರ ಮುಖೇನ ಸೂಚಿಸಿದ್ದರೂ ಬನ್ನಿಹಟ್ಟಿ ಚೆಕ್‌ಪೋಸ್ಟ್‌ನಲ್ಲಿ ಹೊರ ಗುತ್ತಿಗೆ ನೌಕರರನ್ನು ನೇಮಿಸಲಾಗಿದೆ. ಸಂಸದರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವೊಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ.


ಬನ್ನಿಹಟ್ಟಿ ಚೆಕ್‌ಪೋಸ್ಟ್ ಬಳಿಯಿಂದ ಪ್ರತಿನಿತ್ಯ ಸರಾಸರಿ ೧೫೦೦-೧೬೦೦ ಅದಿರು ಸಾಗಣೆ ಲಾರಿಗಳು ಸಂಚರಿಸುತ್ತವೆ. ಒಂದು ಕಾಟಾದಲ್ಲಿ ಅತಿ ಹೆಚ್ಚೆಂದರೆ ೬೦೦-೭೦೦ ಲಾರಿಗಳಲ್ಲಿನ ಅದಿರನ್ನು ತೂಕವನ್ನು ತಪಾಸಣೆ ಮಾಡಬಹುದು. ಒಂದೇ ಯಂತ್ರ ನಿಯಂತ್ರಿಸುವುದರಿಂದ ಇನ್ನುಳಿದ ೭೦೦-೮೦೦ರಷ್ಟು ಲಾರಿಗಳು ವೈಜ್ಞಾನಿಕವಾಗಿ ತಪಾಸಣೆಗೊಳ್ಳದೆ ಮುಂದೆ ಸಾಗುತ್ತಿವೆ. ಇದು ಅಕ್ರಮ ಅದಿರು ಸಾಗಾಣಿಕೆಗೆ ದಾರಿ ಮಾಡಿಕೊಡುತ್ತಿದೆ ಎಂದರು.ಸಂಸದರು ಸ್ಥಳದಿಂದ ತೆರಳಿದ ನಂತರ ಸ್ಥಳಕ್ಕೆ ಆಗಮಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ದ್ವಿತೀಯ ಮಾಧ್ಯಮದವರೊಂದಿಗೆ ಮಾತನಾಡಿ, ಇರುವ ನಾಲ್ಕು ಮಾಪನ ಯಂತ್ರಗಳಲ್ಲಿ ಮೂರು ಸ್ಥಗಿತಗೊಂಡಿವೆ. ಸಮರ್ಪಕವಾಗಿರುವ ಒಂದರಲ್ಲಿ ಮಾತ್ರ ತೂಕವನ್ನು ಪರಿಶೀಲಿಸಿ, ತಪಾಸಣೆ ನಡೆಸಲಾಗುತ್ತಿದೆ. ಸ್ಥಗಿತವಾಗಿರುವ ತೂಕ ಮಾಪನ ಕೇಂದ್ರಗಳನ್ನು ದುರಸ್ತಿಗೊಳಿಸಲು ಮತ್ತು ಖಾಯಂ ನೌಕರರ ನೇಮಕ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಸಮಜಾಯಿಸಿ ನೀಡಿದರು.೨೨ಎಸ್ಎನ್ಡಿ೧

ಸಂಸದ ಈ. ತುಕಾರಾಮ್ ಬುಧವಾರ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಅದಿರು ತಪಾಸಣಾ ಚೆಕ್‌ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.