ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪಟ್ಟಣದ ಹೊಸ ಸಂತೆ ಮೈದಾನದಲ್ಲಿ ಫೆ.11ರಂದು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ನೊಳಂಬ ವೀರಶೈವ ಸಮಾಜ ಅಧ್ಯಕ್ಷ ಲೋಹಿತ್ ಹೇಳಿದರು.ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘ ಬೃಹತ್ ಆರ್ಥಿಕ ಚಟುವಟಿಕೆಗಳ ಮೂಲ ಉದ್ದೇಶಕ್ಕೆ ಪೂರಕವಾಗಿ ಕಾರ್ಯಚಟುವಟಿಕೆ ಮೂಲಕ ಗುರುತಿಸಿಕೊಂಡಿದೆ. ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಲ್ಲಿ ಸಂಘ ಉತ್ತಮವಾಗಿ ಮುನ್ನಡೆದಿದೆ. ಸಮಾವೇಶದಲ್ಲಿ ಅಂದಾಜು 15 ಸಾವಿರ ಅಧಿಕ ಮಹಿಳೆಯರು ಆಗಮಿಸಲಿದ್ದಾರೆ. ಅಗತ್ಯವಾದ ಊಟ, ವಸತಿಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಅಂದು ಶಿರಾಳಕೊಪ್ಪ ವೃತ್ತದ ಬಳಿ ಅಕ್ಕಮಹಾದೇವಿ ಪುತ್ಥಳಿ ಮುಂಭಾಗದಿಂದ ಆರಂಭವಾಗುವ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಲಿದೆ. 25ಕ್ಕೂ ಅಧಿಕ ಪ್ರಕಾರದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಸಮಾವೇಶದಲ್ಲಿ ಕ್ಷೇತ್ರದ ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ರಾಜ್ಯದ ಪ್ರಮುಖ ರಾಜಕೀಯ, ಸಮಾಜ, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಶ್ರೀ ಸೋಮಶೇಖರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮನ್ವಯಾಧಿಕಾರಿ ನಾಗಯ್ಯ ಮಾತನಾಡಿ, ಸಂಸ್ಥೆಯು 9 ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. 3 ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಇದುವರೆಗೂ ₹3.5 ಕೋಟಿಗೂ ಹೆಚ್ಚಿನ ಸಹಾಯಧನ ಸಂಘಗಳಿಗೆ ನೀಡಿದೆ. ಪ್ರಸಕ್ತ ಸಮಾವೇಶದಲ್ಲಿ ಯುವ ರೈತ ಸಂಘ, ವಿದ್ಯಾರ್ಥಿ ಸಂಘವನ್ನು ರಚಿಸಲಾಗುವುದು. ಸಮಾವೇಶದ ಪ್ರಚಾರಕ್ಕಾಗಿ ಸಿದ್ಧಗೊಳಿಸಲಾದ ರಥಕ್ಕೆ ಚಾಲನೆ ನೀಡಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ದಾವಣಗೆರೆ ಸಹಿತ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದೆ ಎಂದು ತಿಳಿಸಿದರು.
ಸಮಾಜದ ಮುಖಂಡ ಶಶಿಧರ ಚುರ್ಚುಗುಂಡಿ, ಗುರುರಾಜ ಜಕ್ಕಿನಕೊಪ್ಪ, ದೇವರಾಜ್, ರಾಜೇಶ್ಮ ತ್ತಿತರರು ಉಪಸ್ಥಿತರಿದ್ದರು.- - - -3ಕೆ.ಎಸ್.ಕೆ.ಪಿ1:
ಶಿಕಾರಿಪುರದ ಹುಚ್ಚೂರಾಯಸ್ವಾಮಿ ದೇವಸ್ಥಾನ ಮುಂಭಾಗ ಸಮಾವೇಶದ ಪ್ರಚಾರ ರಥಕ್ಕೆ ಲೋಹಿತ್ ಚಾಲನೆ ನೀಡಿದರು.