೧೩ರಂದು ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಯ ವಾಸ್ತವಕ್ಕಾಗಿ ಉಪವಾಸ ಸತ್ಯಾಗ್ರಹ

| Published : Jan 09 2025, 12:46 AM IST

೧೩ರಂದು ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಯ ವಾಸ್ತವಕ್ಕಾಗಿ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರು ಎರಡು ಭಿನ್ನ ಹೇಳಿಕೆ ನೀಡಿದ್ದು, ಒಂದೆಡೆ ಆಸ್ಪತ್ರೆಗೆ ಬಾಕಿ ಅನುದಾನ ಬಂದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕಾಮಗಾರಿಗೆ ₹44 ಕೋಟಿ ಬಿಡುಗಡೆಯಾಗಿದೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ತಿಳಿಯದಾಗಿದೆ.

ಶಿರಸಿ: ಶಿರಸಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಸತ್ಯಕ್ಕಾಗಿ ಆಗ್ರಹಿಸಿ, ಜ. ೧೩ರಂದು ಬೆಳಗ್ಗೆ ೯ ಗಂಟೆಗೆ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ತಹಸೀಲ್ದಾರ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನದ ಹಿಂದೆ ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರು ಎರಡು ಭಿನ್ನ ಹೇಳಿಕೆ ನೀಡಿದ್ದು, ಒಂದೆಡೆ ಆಸ್ಪತ್ರೆಗೆ ಬಾಕಿ ಅನುದಾನ ಬಂದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕಾಮಗಾರಿಗೆ ₹44 ಕೋಟಿ ಬಿಡುಗಡೆಯಾಗಿದೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ತಿಳಿಯದಾಗಿದೆ. ಅಲ್ಲದೇ ಕ್ಷೇತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆಸ್ಪತ್ರೆ ವಿಚಾರ ಬಹಳ ಗಂಭೀರವಾಗಿದ್ದು, ಶಾಸಕರು ಗೊಂದಲವನ್ನು ನಿವಾರಿಸಬೇಕು. ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ, ವಾಸ್ತವವನ್ನು ಜನರೆದುರು ತೆರೆದಿಡಬೇಕು. ಆಸ್ಪತ್ರೆ ವಿಚಾರದಲ್ಲಿ ಶಾಸಕರ ಬೆಂಬಲಕ್ಕೆ ಸದಾ ಇದ್ದು, ತಮ್ಮಿಂದ ಸತ್ಯಕ್ಕಾಗಿ ಆಗ್ರಹಿಸುತ್ತಿದ್ದೇವೆ ಎಂದರು.

₹142 ಕೋಟಿ ವೆಚ್ಚ: ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸತತ ಪ್ರಯತ್ನದಿಂದ ಶಿರಸಿಗೆ ಸೂಪರ್ ಸ್ಪೆಷಾಲಿಟಿ ಒಳಗೊಂಡ ಹೈಟೆಕ್ ಆಸ್ಪತ್ರೆ ಕ್ಯಾಬಿನೆಟ್ನಲ್ಲಿ ತೀರ್ಮಾನವಾಗಿತ್ತು. ಅದಕ್ಕಾಗಿ ₹೧೪೨ ಕೋಟಿ ಮಂಜೂರಾಗಿತ್ತು. ₹೧೧೨ ಕೋಟಿ ಸಿವಿಲ್ ಕಾಮಗಾರಿಗಳ ವೆಚ್ಚ ₹೩೦ ಕೋಟಿ ವೈದ್ಯಕೀಯ ಉಪಕರಣ ಮತ್ತು ಯಂತ್ರಗಳ ವೆಚ್ಚಗಳನ್ನು ಒಳಗೊಂಡಿತ್ತು. ಮೂರು ವರ್ಷದೊಳಗಡೆ ಮುಗಿಯಬೇಕಿದ್ದ ಕೆಲಸ ಕೊರೋನಾ ಕಾರಣದಿಂದ ಎರಡು ವರ್ಷ ವಿಳಂಬವಾಯಿತು. ಈಗ ಸುಮಾರು ಎಂಟು ತಿಂಗಳ ಹಿಂದೆ ಸುಮಾರು ಶೇ. ೭೦ರಿಂದ ಶೇ.೮೦ ರಷ್ಟು ಕೆಲಸ ಪೂರ್ಣಗೊಂಡಿದೆ. ಸರ್ಕಾರದ ಆದೇಶದನ್ವಯ ಶೇ. ೮೦ರಷ್ಟು ಕೆಲಸ ಪೂರ್ಣಗೊಂಡ ನಂತರ ಯಂತ್ರೋಪಕರಣಗಳಿಗಾಗಿ ಮೀಸಲಿಟ್ಟಿರುವ ₹೩೦ ಕೋಟಿ ಕುರಿತಾಗಿ ಟೆಂಡರ್ ಕರೆಯಬೇಕಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಇಲ್ಲಿನ ಆಡಳಿತಾಧಿಕಾರಿಗಳು ಕಳುಹಿಸಿದ್ದು, ಇದು ತಾಲೂಕು ಆಸ್ಪತ್ರೆ, ಹಾಗಾಗಿ ₹೩೦ ಕೋಟಿ ಬದಲಾಗಿ ಕೇವಲ ₹೫.೨೦ ಕೋಟಿ ಹಣವನ್ನು ಮಾತ್ರ ನೀಡಲು ಸಾಧ್ಯ ಎನ್ನುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು.ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ, ಜಯಶೀಲ ಗೌಡ ಬನವಾಸಿ, ಶಿವಾನಂದ ದೇಶಳ್ಳಿ, ಅನಿಲ ನಾಯಕ ಶಿರಸಿ, ಹರೀಶ ಕರ್ಕಿ, ಜಿ.ಎಸ್. ಹೆಗಡೆ ಹಲ್ಲುಸರಗಿ, ಚಿದಾನಂದ ಹರಿಜನ, ನಾಗರಾಜ ಜೋಶಿ ಮತ್ತಿತರರು ಗೋಷ್ಠಿಯಲ್ಲಿ ಇದ್ದರು.