ಸಾರಾಂಶ
ಬಳ್ಳಾರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಇದೇ ಅ. 19 ಮತ್ತು 20ರಂದು ಜಿಲ್ಲಾದ್ಯಂತ ಸಂಚರಿಸಲಿದ್ದು, ರಥಯಾತ್ರೆಗೆ ಗೌರಯುತವಾಗಿ ಸ್ವಾಗತ ಮತ್ತು ಬೀಳ್ಕೊಡುಗೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಪ್ರಮೋದ್ ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ‘ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ’ಯ ಸಂಚಾರ ಹಿನ್ನೆಲೆಯಲ್ಲಿ ಈ ಕುರಿತು ಅಗತ್ಯ ಸಿದ್ಧತೆಗಾಗಿ ಮಂಗಳವಾರ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅ.19 ಮತ್ತು 20ರಂದು ಸಿರುಗುಪ್ಪ ತಾಲೂಕಿಗೆ ಆಗಮಿಸಲಿದೆ. ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವನ್ನು ಅಲ್ಲಿನ ತಾಲೂಕು ಆಡಳಿತದಿಂದ ಸ್ವಾಗತಿಸಲಾಗುವುದು. ರಥ ಸಿರುಗುಪ್ಪದಿಂದ ಕುರುಗೋಡು, ಬಳ್ಳಾರಿ, ಸಂಡೂರು, ಕಂಪ್ಲಿ ತಾಲೂಕು ಮೂಲಕ ವಿಜಯನಗರ ಜಿಲ್ಲೆಗೆ ಸಂಚರಿಸಲಿದೆ ಎಂದು ತಿಳಿಸಿದರು.
ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಯಶಸ್ವಿಯಾಗಿ ಜರುಗಬೇಕು. ರಥಯಾತ್ರೆ ಆಗಮಿಸಿದಾಗ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡಪರ, ರೈತ, ಕಾರ್ಮಿಕ ಸಂಘಟನೆಗಳು, ವಿದ್ಯಾ ಸಂಸ್ಥೆಗಳು, ಎನ್.ಸಿ.ಸಿ., ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸ್ತ್ರೀ-ಶಕ್ತಿ ಸಂಘಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಜೊತೆಗೂಡಿಸಿಕೊಂಡು ಕನ್ನಡ ರಥಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಆಯಾ ತಾಲೂಕುಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು. ನಂತರ ತಾಲೂಕಿನ ಗಡಿ ಭಾಗಗಳಲ್ಲಿ ಬೀಳ್ಕೊಡಬೇಕು.ಕನ್ನಡ ರಥಯಾತ್ರೆ ಸಂಚರಿಸುವ ವೇಳೆಯಲ್ಲಿ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಯಾವುದೇ ಅಡ್ಡಿಯಿಲ್ಲದಂತೆ ಸಂಚರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ರಥಯಾತ್ರೆಯು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಮತ್ತು ವಾಸ್ತವ್ಯದ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ತಿಳಿಸಿದರು.
ತಾಲೂಕು ಆಡಳಿತ, ಜಿಲ್ಲಾ ಸಾಹಿತ್ಯ ಪರಿಷತ್ತು ಸೇರಿದಂತೆ ಆಯಾ ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಏರ್ಪಡಿಸುವ ಮೂಲಕ ಕನ್ನಡ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಬೇಕು ಮತ್ತು ಎಲ್ಲರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ರಥಯಾತ್ರೆಯನ್ನು ಯಶಸ್ವಿಗೊಳಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ‘ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ’ಯ ಸಂಚಾರ ಯಶಸ್ಸಿಗೆ ತಮ್ಮ ಸಲಹೆ-ಸೂಚನೆ ನೀಡಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಗೌಸಿಯಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))