ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ಜನವರಿ 22ರಂದು ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀರಾಮನ ದೇವಾಲಯವನ್ನು ಲೋಕಾರ್ಪಣೆ ಗೊಳಿಸಲಾಗುವುದು ಎಂದು ದೇವಾಲಯ ನಿರ್ಮಾಣದ ಸಮಿತಿಯ ಪ್ರಮುಖರಾದ ಸಿ.ಎಸ್.ಎನ್. ರಮೇಶ್ ತಿಳಿಸಿದರು.ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಕುರಿತು ಮಾತನಾಡಿದ ಅವರು, ಶ್ರೀರಾಮ ಮಂದಿರದ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿ 22 ರಂದು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುವುದು, ಅಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿ ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಅದೇ ದಿನ ಸಬ್ಬೇನಹಳ್ಳಿಯ ಮಂದಿರದ ಗರ್ಭಗೃಹದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಗ್ರಾಮಸ್ಥರು ನಿರ್ಧರಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭಾರತೀಯರ 500 ವರ್ಷಗಳ ಬಹು ನಿರೀಕ್ಷಿತ ಕನಸಾಗಿತ್ತು. ಅದೇ ರೀತಿ ಗ್ರಾಮಸ್ಥರ ಕನಸಾದ ಶ್ರೀರಾಮ ದೇಗುಲದ ನಿರ್ಮಾಣಕ್ಕೆ ಸುಮಾರು 50 ವರ್ಷಗಳ ಹಿಂದೆ ಪಾಯ ಹಾಕಿಸಿದ್ದರು. ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣವಾಗಿರಲಿಲ್ಲ, ಇದೀಗ ಒಂದುವರೆ ವರ್ಷದ ಹಿಂದೆ ನಾವು ಮತ್ತು ನಮ್ಮೊಂದಿಗೆ ಸಹಕಾರ ನೀಡಿದ ಗ್ರಾಮದ ಮುಖ್ಯಸ್ಥರು ಸೇರಿ ಇಂದು ಸುಮಾರು ಒಂದು ಕೋಟಿ ರು.ವೆಚ್ಚದಲ್ಲಿ ದೇವಾಲಯ ನಿರ್ಮಾಣ ಹಾಗೂ ವಿಗ್ರಹಗಳ ಪ್ರತಿಷ್ಠಾಪನ ಕಾರ್ಯ ನೆರವೇರಿಸಲು ಸನ್ನದರಾಗಿದ್ದೇವೆ ಎಂದು ತಿಳಿಸಿದರು.
ಈ ದೇವಾಲಯದಲ್ಲಿ ಶ್ರೀರಾಮ, ಸೀತಾಮಾತೆ ಮತ್ತು ಲಕ್ಷ್ಮಣನ ವಿಗ್ರಹಗಳು ಪೂಜಿತವಾಗುತ್ತವೆ. ಇದಲ್ಲದೆ ದತ್ತಾತ್ರೇಯ ಸ್ವಾಮಿ ಮತ್ತು ಗಣೇಶ ದೇವರ ವಿಗ್ರಹಗಳು ಪ್ರತಿಷ್ಠಾಪನೆಯಾಗುತ್ತಿವೆ. ಅದೇ ರೀತಿ ದೇವಾಲಯದ ಎದುರು ಸುಮಾರು 1 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ.ಜನವರಿ 22 ದೇಶದ ಜನತೆಗೆ ಅತ್ಯಂತ ಮಹತ್ವಪೂರ್ಣವಾದ ದಿನವಾಗಿದೆ. ಕಾರಣ, ಅಂದು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಗೊಳ್ಳಲಿದೆ. ಅದೇ ದಿನ ನಾವೂ ಸಹ ನಮ್ಮ ಸಬ್ಬೇನಹಳ್ಳಿ ಗ್ರಾಮದಲ್ಲಿ ರಾಮನ ಪ್ರತಿಷ್ಠಾಪನೆ ಮಾಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದರು.
ದೇವಾಲಯ ಅಭಿವೃದ್ಧಿಗಾಗಿ ಒಂದು ಸಮಿತಿಯನ್ನು ರಚಿಸಲಾಗುವುದು, ಆ ಸಮಿತಿಯಲ್ಲಿ ಗ್ರಾಮದ ಪ್ರಮುಖರು ಇರುತ್ತಾರೆ. ಈ ದೇವಾಲಯದಲ್ಲಿ ರಾಮನು ಪ್ರತಿಷ್ಠಾಪನೆಯಾದ ನಂತರ ಸುಮಾರು 48 ದಿನಗಳ ಕಾಲ ಮಂಡಲ ಪೂಜೆ ಕಾರ್ಯಕ್ರಮಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.ಅಯೋದ್ಯೆಯಲ್ಲಿರುವ ಶ್ರೀರಾಮನ ದೇವಾಲಯದ ಉದ್ಘಾಟನೆಗೆ ಕೋಟಿ ಕೋಟಿ ಜನ ಬಾಗವಹಿಸಲು ಸಾದ್ಯವಾಗುವುದಿಲ್ಲವೆಂದು ತಮ್ಮ ತಮ್ಮ ವಾಸ್ತವ್ಯದ ಸ್ಥಳದಲ್ಲಿರುವ ದೇವಾಲಯಗಳಲ್ಲಿಯೇ ದೀಪ ಹಚ್ಚಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆದೆ ದಿನ ಅದೇ ಮುಹೂರ್ತಕ್ಕೆ ಚಿಕ್ಕಬಳ್ಳಾಪುರ ತಾಲೂಕು ಸಬ್ಬೇನಹಳ್ಳಿಯಲ್ಲಿ ನೂತನ ಶ್ರೀ ರಾಮದೇವನ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ. ನಮ್ಮ ಗ್ರಾಮದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪಿಸುವ ದಿವ್ಯ ಘಳಿಗೆಯಲ್ಲಿ ಪಾಲ್ಗೋಳ್ಳೋಣ ಬನ್ನಿ ಎಂದು ರಮೇಶ್ ಸ್ಥಳಿಯ ಭಕ್ತರಿಗೆ ಮನವಿ ಮಾಡಿಕೊಂಡರು.
ದೇಗುಲದ ಉದ್ಘಾಟನೆಯ ಕಾರ್ಯಕ್ಕೆ ನಾವು ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ಭಕ್ತಾದಿಗಳ ಮತ್ತು ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಹಕಾರವನ್ನು ಕೋರುವುದಾಗಿ ತಿಳಿಸಿದರು.ದೇವಾಲಯದ ನಿರ್ಮಾಣ ಪ್ರಮುಖರು ಹಾಗೂ ಗ್ರಾಮಸ್ಥರಾದ ಎಸ್.ಎನ್. ರಾಮಯ್ಯ, ಎಸ್.ಎನ್.ವೆಂಕಟೇಶ್, ಭಜನೆ ಶ್ರೀನಿವಾಸ ದಾಸ್, ಎಸ್.ವಿ. ಶ್ರೀನಿವಾಸ್, ಸುನಂದಮ್ಮ, ಎಸ್.ಎನ್.ಗುರುಮೂರ್ತಿ ಮತ್ತಿತರರು ಇದ್ದರು.