ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಮೂರ್ತಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಜಗನ್ ಮೋಹನ ಅರಮನೆಯಲ್ಲಿ ಜ. 26ರಂದು ದಾಸೋಹ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀಗಳ ಶುಭನಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅಖಿಲ ಕರ್ನಾಟಕ ಸಿದ್ದಗಂಗಾಶ್ರೀಗಳ ಭಕ್ತ ವೃಂದದ ವತಿಯಿಂದ ಆಯೋಜಿಸಿರುವ ಸಮಾರಂಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಸಮಿತಿ ಸಂಚಾಲಕ ಡಾ.ಕೆ. ವಸಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಮನವಿ ಮಾಡಿದರು.
ಜ.26ರಂದು ಮಧ್ಯಾಹ್ನ 3ಗಂಟೆಗೆ ಪ್ರಜಾಕಿರಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿದ್ದಗಂಗಾಶ್ರೀಗಳ ಜೀವನಚರಿತ್ರೆ ಕಿರುನಾಟಕ ಪ್ರದರ್ಶನ ನಡೆಯಲಿದ್ದು ಸಂಜೆ 4 ಗಂಟೆಗೆ ಅಪೇಕ್ಷ ನೃತ್ಯ ಕಲಾತಂಡದಿಂದ ಭಕ್ತಿ ಸಂಗಮ, ಭಕ್ತಿಗೀತೆ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ನಿರಂತರ ದಾಸೋಹ ನಡೆಯಲಿದೆ ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ, ಕಿರಿಯಶ್ರೀ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ನಟರಾಜಮಠದ ಶ್ರೀ ಚಿದಾನಂದ ಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಪಂಚಗವಿ ಮಠದ ಶ್ರೀ ಶ್ರೀಕಂಠಸ್ವಾಮೀಜಿ ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ವಿವಿಧ ಮಠಗಳ ಪೀಠಾಧ್ಯಕ್ಷರು ದಿವ್ಯಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಯಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಸಿ.ಎನ್. ಮಂಜುನಾಥ್, ಖ್ಯಾತಚಿತ್ರ ನಟ ಡಾಲಿ ಧನಂಜಯ್, ಶಾಸಕರಾದ ಶ್ರೀವತ್ಸ, ಕೆ. ವಿವೇಕಾನಂದ, ಮಾಜಿ ಸಂಸದ ಪ್ರತಾಪ್ ಸಿಂಹ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ. ಶಿವಕುಮಾರ್ ಪಾಲ್ಗೊಳ್ಳುವರು.ಸಮಾಜ ಸೇವಕ ನಾಗರಾಜ್ ವಿ. ಬೈರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಸಮಿತಿ ಅಧ್ಯಕ್ಷ ಆರ್.ಎಸ್. ರಾಜು ಹಾಗೂ ಆರ್.ಕೆ. ಇಂಡಸ್ಟ್ರಿಸ್ಮಾಲೀಕ ಡಾ.ಕೆ. ವಸಂತ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಿ. ನಂಬಿರಾಜ್, ಡಾ.ಎ.ಪಿ. ಶ್ರೀನಾಥ್, ಮಣಿಶೇಖರ್, ಭಾರತಿ ಗೋವಿಂದಸ್ವಾಮಿ, ಡಾ. ನಂದಿನಿ ಮಂಜುನಾಥ್, ಎಸ್. ಬೆಟ್ಟೇಗೌಡ, ಎಚ್.ಸಿ. ಪ್ರಕಾಶ್, ಸಿ.ಎನ್. ಸದಾಶಿವ, ಪಾಂಡುರಂಗ ಮೊದಲಾದವರು ಆಗಮಿಸುವರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ವಿರೂಪಾಕ್ಷ, ಉಪಾಧ್ಯಕ್ಷ ಕೆ.ವಿ. ಮಲ್ಲೇಶ್, ಮಹಾಸಭಾ ನಿರ್ದೇಶಕ ದಾರಿಪುರ ಚಂದ್ರು, ಗಂಗಾಧರಪ್ಪ, ಬೆಟ್ಟೇಗೌಡ ಇದ್ದರು.