ಕುಶಾಲನಗರ: 9ರಂದು ಹಿ.ಚಿ ಹಬ್ಬ, ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

| Published : Nov 01 2024, 12:00 AM IST

ಕುಶಾಲನಗರ: 9ರಂದು ಹಿ.ಚಿ ಹಬ್ಬ, ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ನ. 9ರಂದು ಕುಶಾಲನಗರ ಕೂಡ್ಲೂರು ವೀರ ಭೂಮಿ ಜನಪದ ಗ್ರಾಮದಲ್ಲಿ ಹಿ.ಚಿ. ಹಬ್ಬ ಮತ್ತು ಜನಪದರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕನ್ನಡದ ಪ್ರಖ್ಯಾತ ದೇಸಿ ವಾಹಿನಿ ಜನಪದ ಸಿರಿ ಕನ್ನಡ ತಂಡದ ಆಶ್ರಯದಲ್ಲಿ ನ. 9 ರಂದು ಕುಶಾಲನಗರದ ಕೂಡ್ಲೂರು ವೀರ ಭೂಮಿ ಜನಪದ ಗ್ರಾಮದಲ್ಲಿ ಹಿ.ಚಿ ಹಬ್ಬ ಮತ್ತು ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ -2024 ಹಮ್ಮಿಕೊಳ್ಳಲಾಗಿದೆ ಎಂದು ಜನಪದ ಸಿರಿ ತಂಡದ ಮುಖ್ಯಸ್ಥ ಜರಗನಹಳ್ಳಿ ಕಾಂತರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಗಿರಿಜನ ಜಾನಪದ ಸಂಪತ್ತು ಎಂದು ಖ್ಯಾತರಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹಿ.ಚಿ ಬೋರ ಲಿಂಗಯ್ಯ ಅವರಿಗೆ 70 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದರು.

ಬುಡಕಟ್ಟು ಗಿರಿಜನರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಡಾ.ಬೋರಲಿಂಗಯ್ಯ ಅವರನ್ನು ಈ ಸಂದರ್ಭ ಜನಪದ ಸಿರಿ ಕನ್ನಡದಿಂದ ಮತ್ತು ಜನಪದ ಕಲಾವಿದರ ಮೂಲ ಗೌರವಿಸಲಾಗುವುದು.

ಶಾಸ್ತ್ರೀಯ ಕಲೆಗಾರರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಜಾನಪದ ಕಲೆಗಾರರಿಗೆ ಕೂಡ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳ ನಡುವೆ ಅಲೆದು ಬುಡಕಟ್ಟು ಜನರ ಸಂಪರ್ಕ ಮಾಡುವ ಮೂಲಕ ನಾಡಿಗೆ ಪರಿಚಯಿಸಿದ ಡಾ ಬೋರಲಿಂಗಯ್ಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು .

ರಾಜ್ಯದ ಬುಡಕಟ್ಟು ಕಲಾವಿದರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ಇದಾಗಿದೆ. ಸುಮಾರು 10 ಬುಡಕಟ್ಟು ಜನಾಂಗ ಒಂದೇ ಕಡೆ ಸೇರಿ ನಾನಾ ಪ್ರಕಾರಗಳ ಕಲೆಗಳ ಪ್ರದರ್ಶನ ನಡೆಸಲಿದೆ ಎಂದು ಕಾಂತರಾಜು ತಿಳಿಸಿದರು.

ನಾಲ್ಕು ದಶಕಗಳ ಹಿಂದೆ ಗಿರಿಜನರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದ ಸರ್ಕಾರಗಳಿಗೆ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನಡುವೆ ನೆಲೆಸಿದ್ದ ಗಿರಿಜನರ ಬುಡಕಟ್ಟು ಜನಾಂಗವನ್ನು ಜನಗಣತಿಯಲ್ಲಿ ಸೇರ್ಪಡೆ ಮಾಡಲು ಶ್ರಮಿಸಿದ ಬೋರಲಿಂಗಯ್ಯ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರ ಸಮ್ಮುಖದಲ್ಲಿ ಅವರನ್ನು ಗೌರವಿಸಲಾಗುವುದು.

ಅಂದು ನಡೆಯುವ ಜನಪದ ಸಿರಿ ಕಾರ್ಯಕ್ರಮದಲ್ಲಿ ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆಯಲಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಶ್ರಾಂತ ಕುಲಪತಿಗಳು ನಾಡಿನ ಖ್ಯಾತ ಜಾನಪದ ಗಾಯಕರು, ಜನಪ್ರತಿನಿಧಿಗಳು, ಜಾನಪದ ತಜ್ಞರು ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ವಿವಿಧ ಸಮುದಾಯಗಳ ನೆಲಮೂಲ ಸಂಸ್ಕೃತಿಯ ಪ್ರತಿನಿಧಿಗಳಿಗೆ ಕಲಾವಿದರಿಗೆ ಖ್ಯಾತ ರಂಗ ನಿರ್ದೇಶಕರಿಗೆ ಜಾನಪದ ಕಲೆಗಳ ಪರಿಚಯಕರಿಗೆ ಈ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ವೀರಭೂಮಿ ಜನಪದ ಗ್ರಾಮದ ಪ್ರಧಾನ ವ್ಯವಸ್ಥಾಪಕರಾದ ಎಂ ಪಿ ಅವಿನಾಶ್, ವ್ಯವಸ್ಥಾಪಕರಾದ ಎಚ್ ಆರ್ ನಾಗೇಂದ್ರ ಮತ್ತು ಜಿ ಕೆ ಪೃಥ್ವಿರಾಜ್ ಇದ್ದರು.