ಸಾರಾಂಶ
ಹೈಕೋರ್ಟ್ ಆದೇಶದಂತೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು, ಭ್ರಷ್ಟಾಚಾರದಿಂದ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಉಡುಪಿ
ಹೈಕೋರ್ಟ್ ಆದೇಶದಂತೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು, ಭ್ರಷ್ಟಾಚಾರದಿಂದ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಆ.5 ರಂದು ಕಟ್ಟಡ ನಿರ್ಮಾಣ ಕಾರ್ಮಿಕರು ಮುಖ್ಯಮಂತ್ರಿ ಮನೆ ಚಲೋ ನಡೆಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹತೇಂಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸರ್ಕಾರ ಕಟ್ಟಡ ಕಾರ್ಮಿಕರ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು, ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು, ಇದನ್ನು 2022ರಿಂದ 2024ರ ವರಗೆ ಬಾಕಿ ಇರುವ ಅರ್ಜಿಗಳಿಗೂ ವಿಸ್ತರಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದನ್ನು ನಿಲ್ಲಿಸಬೇಕು, ವಿಳಂಬ ಮಾಡದೇ ಕಾರ್ಮಿಕ ಕಾರ್ಡ್ ವಿತರಿಸಬೇಕು. ಪಿಂಚಣಿದಾರರಿಗೆ ಶೀಘ್ರವೇ ಪಿಂಚಣಿ ಹಣವನ್ನು ಪಾವತಿಸಬೇಕು. ಕಾರ್ಮಿಕರಿಗೆ ಸವಲತ್ತುಗಳ ನೆಪದಲ್ಲಿ ಈವರೆಗೆ ನಡೆದ ಖರೀದಿಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಇತ್ಯಾದಿಗಳು ಸೇರಿದಂತೆ ಏಳು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದವರು ತಿಳಿಸಿದರು.
ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರ ಕೂಡ ಕಾರ್ಮಿಕರ ಹೆಸರಲ್ಲಿ ಲ್ಯಾಪ್ ಟ್ಯಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿಗೆ ಇತ್ಯಾದಿಗಳಿಗೆ ಕೋಟ್ಯಾಂತರ ರು. ವ್ಯಯ ಮಾಡುತ್ತಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ಸಭೆ ನಡೆಸದೇ ಬೇಕಾಬಿಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಕಾರ್ಮಿಕರ ಸಲ್ಲಿಸಿದ ಮನವಿ ಹೋರಾಟಕ್ಕೆ ಕಿವಿಗೊಡುತ್ತಿಲ್ಲ ಎಂದವರು ಆರೋಪಿಸಿದರು.ಇದೆಲ್ಲದವರ ವಿರುದ್ಧ ಆ.5ರಂದು ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಮಂದಿ ಕಟ್ಟಡ ಕಾರ್ಮಿಕರು ಸೇರಲಿದ್ದಾರೆ. ಉಡುಪಿ ಜಿಲ್ಲೆಯಿಂದ ಸುಮಾರು 500 ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಬಂಗೇರ, ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಪದಾದಿಕಾರಿಗಳಾದ ರೋನಾಲ್ಡ್ ರಾಜೇಶ್ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.