ಸಾರಾಂಶ
ಮಂಗಳೂರಿನ ನಗರದ ಸಂಘನಿಕೇತನದಲ್ಲಿ ಜ. 4 ಮತ್ತು 5 ರಂದು ಮಂಗಳೂರಿನಲ್ಲಿ ಪ್ರಥಮ ಬಾರಿ ‘ಕಂದಮೂಲ’ ಗೆಡ್ಡೆ ಗೆಣಸು ಮತ್ತು ವಿವಿಧ ಸೊಪ್ಪಿನ ಪ್ರದರ್ಶನ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನಿಸರ್ಗದ ಕೊಡುಗೆಯಾದ ಗೆಡ್ಡೆಗೆಣಸುಗಳ ಅದ್ಭುತ ಲೋಕವನ್ನು ಕರಾವಳಿ ಭಾಗದ ಜನತೆ ಮುಂದೆ ತೆರೆದಿಡಲು ಸಾವಯವ ಕೃಷಿಕ ಗ್ರಾಹಕ ಬಳಗ ನೇತೃತ್ವದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಮಂಗಳೂರಿನ ನಗರದ ಸಂಘನಿಕೇತನದಲ್ಲಿ ಜ. 4 ಮತ್ತು 5 ರಂದು ಮಂಗಳೂರಿನಲ್ಲಿ ಪ್ರಥಮ ಬಾರಿ ‘ಕಂದಮೂಲ’ ಗೆಡ್ಡೆ ಗೆಣಸು ಮತ್ತು ವಿವಿಧ ಸೊಪ್ಪಿನ ಪ್ರದರ್ಶನ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಕೇರಳ, ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು, ಬಿಹಾರ ಮತ್ತಿತರ ರಾಜ್ಯಗಳಿಂದಲೂ ಕಂದಮೂಲ ಮೇಳಕ್ಕೆ ಆಗಮಿಸಲಿದ್ದಾರೆ. ಸುಮಾರು 250ಕ್ಕೂ ಅಧಿಕ ಮಂದಿ ಕಂದಮೂಲ ಬೆಳೆಗಾರರು ಆಗಮಿಸಲಿದ್ದು, ಅವರೆಲ್ಲ ಮನೆಗಳಿಗೆ ಸಂಘಟಕರು ತೆರಳಿ ಸಾವಯವ ಅಕ್ಕಿ ಮತ್ತು ಬೆಲ್ಲ ನೀಡಿ ಸಾಂಪ್ರದಾಯಿಕವಾಗಿ ಆಮಂತ್ರಿಸಿದ್ದಾರೆ.ಕೇರಳ ಕಮಾಲ್:
ಕಂದಮೂಲ ಮೇಳದಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಗೆಡ್ಡೆ ಗೆಣಸು, ಸೊಪ್ಪುಗಳ ಮಹಾಪೂರವೇ ಹರಿದುಬರಲಿದೆ. ಮುಖ್ಯವಾಗಿ ಕೇರಳದ ವಯನಾಡ್‌ನಲ್ಲಿ 200 ವಿಧದ ಕಂದಮೂಲ ಬೆಳೆಯುವ ವಿಶ್ವ ಮಟ್ಟದ ಖ್ಯಾತಿಯ ಅಪ್ರತಿಮ ಬೆಳೆಗಾರ ಶಾಜಿ ಆಗಮಿಸಲಿದ್ದಾರೆ. ಅವರು ಬೆಳೆಯುವ ವೈವಿಧ್ಯಮಯ ಕಂದಮೂಲಗಳನ್ನು ಈ ಮೇಳಕ್ಕೆ ತರಲಿದ್ದು, ಮೇಳದ ವಿಶೇಷ ಆಕರ್ಷಣೆ ಆಗಲಿದೆ. ಮೇಳಕ್ಕೆ ಆಗಮಿಸುವ ಎಲ್ಲ ಬೆಳೆಗಾರರೂ ತಾವು ಬೆಳೆಯುವ ಗೆಡ್ಡೆ, ಗೆಣಸು, ಸೊಪ್ಪುಗಳೊಂದಿಗೆ ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಬಳಗದಿಂದ ಮಾತುಕತೆ, ಆಹ್ವಾನ ನೀಡುವ ಕೆಲಸ ನಡೆಯುತ್ತಿದೆ. ವಿವಿಧ ಗೆಡ್ಡೆಗೆಣಸು, ಸೊಪ್ಪುಗಳ ವೈವಿಧ್ಯತೆಯ ಪ್ರದರ್ಶನದ ಜತೆಗೆ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಗೆಡ್ಡೆ ಗೆಣಸು ಹಾಗೂ ಸೊಪ್ಪುಗಳ ವಿವಿಧ ಬಗೆಯ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟವೂ ಮೇಳದಲ್ಲಿರಲಿದೆ.ಉಚಿತ ತರಬೇತಿ:
ಮೇಳದ ಪೂರ್ವಭಾವಿಯಾಗಿ ಇತ್ತೀಚೆಗೆ ಶಕ್ತಿನಗರದ ಪ್ರಕೃತಿಫುಡ್ಸ್‌ನಲ್ಲಿ ಹಾಲು ಕೆಸುವಿನ ಬೆಳೆಸುವುದು ಹಾಗೂ ಮೌಲ್ಯವರ್ಧನೆಯ ಬಗ್ಗೆ ಉಚಿತ ತರಬೇತಿಯನ್ನು ನಡೆಸಲಾಗಿದೆ. ಜಾನ್ಸನ್ ನೆಲ್ಯಾಡಿ ಮತ್ತು ತಂಡದಿಂದ ತರಬೇತಿ ನೀಡಲಾಗಿದೆ. ನ. 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಂತೂರು ಶ್ರೀ ಭಾರತೀ ಸಭಾಭವನದಲ್ಲಿ ಎಲೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.ಮೇಳಕ್ಕಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಎಂ.ಬಿ. ಪುರಾಣಿಕ್, ಅಧ್ಯಕ್ಷರಾಗಿ ನಿವೃತ್ತ ಎಡಿಸಿ ಪ್ರಭಾಕರ ಶರ್ಮರನ್ನು ಆಯ್ಕೆ ಮಾಡಲಾಗಿದೆ...............
ಮೌಲ್ಯವರ್ಧಿತ ಉತ್ಪನ್ನಗಳಿಗೂ ಒತ್ತುಗೆಡ್ಡೆ ಗೆಣಸು ರಾಜ್ಯ ಮಟ್ಟದ ಮೇಳದಲ್ಲಿ ಕೇವಲ ಪ್ರದರ್ಶನ ಮಾತ್ರವಲ್ಲ ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ರುಚಿಯನ್ನೂ ನೋಡಬಹುದು.
ಬೆಳಗ್ಗೆ ತಿಂಡಿಯಿಂದ ತೊಡಗಿ ಮಧ್ಯಾಹ್ನ ಊಟ, ಸಂಜೆಯ ತಿಂಡಿಗಳಿಗೆ ಗೆಡ್ಡೆ ಗೆಣಸಿನ ಟಚ್ ನೀಡಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟು ಗೆಡ್ಡೆ ಗೆಣಸುಗಳ ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯನ್ನು ಗ್ರಾಹಕರಿಗೆ ಉಣಬಡಿಸಲು ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಈಗಾಗಲೇ ಗೆಡ್ಡೆ ಗೆಣಸು ಬೆಳೆಗಾರರಿಗೆ ತರಬೇತಿ ನೀಡಲಾಗಿದೆ. .................ಮೈಸೂರು ಮತ್ತು ಜೊಯಿಡಾದಲ್ಲಿ ಇಂತಹ ಗೆಡ್ಡೆಗೆಣಸು ಮೇಳಗಳು ನಡೆಯುತ್ತಿರುತ್ತವೆ. ಆದರೆ ದ.ಕ. ಜಿಲ್ಲೆಯಲ್ಲಿ ಇದನ್ನು ಪ್ರಥಮ ಬಾರಿಗೆ ನಡೆಸಲಾಗುತ್ತಿದೆ. ಮನುಷ್ಯನ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಆಹಾರದಲ್ಲಿ ತರಕಾರಿ, ಹಣ್ಣುಹಂಪಲುಗಳ ಜತೆಗೆ ಗೆಡ್ಡೆ ಗೆಣಸು ಮತ್ತು ಸೊಪ್ಪುಗಳ ಪಾತ್ರವೂ ಪ್ರಮುಖ. ಈ ಗೆಡ್ಡೆ ಗೆಣಸುಗಳ ವೈವಿಧ್ಯತೆ, ಸೊಪ್ಪುಗಳ ನಾನಾ ವಿಧಗಳ ಬಗ್ಗೆ ಅರಿವು ಹಾಗೂ ಪರಿಚಯ ನೀಡುವುದೇ ಈ ಮೇಳದ ಉದ್ದೇಶ.-ರತ್ನಾಕರ ಕುಳಾಯಿ, ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು