ಜೂ.೩೦ರಂದು ನಾದಬ್ರಹ್ಮ ಹಂಸಲೇಖರಿಗೆ ನಾಲ್ವಡಿ ಪ್ರಶಸ್ತಿ ಪ್ರದಾನ

| Published : Jun 26 2024, 12:33 AM IST

ಜೂ.೩೦ರಂದು ನಾದಬ್ರಹ್ಮ ಹಂಸಲೇಖರಿಗೆ ನಾಲ್ವಡಿ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತು ಅವುಗಳಿಗೆ ಹೊಸತನವನ್ನು ತುಂಬುವುದಕ್ಕೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಿರಾಸಕ್ತಿ ವಹಿಸಿರುವುದು ಬೇಸರದ ಸಂಗತಿ. ಮಂಡ್ಯ ನಗರದಲ್ಲೊಂದು ಗುಣಮಟ್ಟದ ರಂಗಮಂದಿರ ಇಲ್ಲ. ಇರುವ ರಂಗ ಮಂದಿರಗಳಲ್ಲೂ ಬೆಳಕಿನ ವ್ಯವಸ್ಥೆ, ಧ್ವನಿವರ್ಧಕ, ವೇದಿಕೆ ಪೀಠೋಪಕರಣಗಳು, ಆಸನಗಳ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆ ಸಮರ್ಪಕವಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ಜೂ.೩೦ರಂದು ಮಧ್ಯಾಹ್ನ ೩ ಗಂಟೆಗೆ ನಗರದ ರೈತ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ದಿವ್ಯ ಸಾನ್ನಿಧ್ಯವನ್ನು ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ ವಹಿಸುವರು. ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ನಾಲ್ವಡಿ ಅವರ ಭಾವಚಿತ್ರ ಅನಾವರಣವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೆರವೇರಿಸುವರು. ನಾಲ್ವಡಿ ಅವರನ್ನು ಕುರಿತು ಬೆಂಗಳೂರು ಕೇಂದ್ರ ವಲಯ ಐಜಿ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸುವರು ಎಂದರು.

ರಂಗಭೂಮಿ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳ ನಿರಾಸಕ್ತಿ:

ರಂಗಭೂಮಿ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತು ಅವುಗಳಿಗೆ ಹೊಸತನವನ್ನು ತುಂಬುವುದಕ್ಕೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಿರಾಸಕ್ತಿ ವಹಿಸಿರುವುದು ಬೇಸರದ ಸಂಗತಿ. ಮಂಡ್ಯ ನಗರದಲ್ಲೊಂದು ಗುಣಮಟ್ಟದ ರಂಗಮಂದಿರ ಇಲ್ಲ. ಇರುವ ರಂಗ ಮಂದಿರಗಳಲ್ಲೂ ಬೆಳಕಿನ ವ್ಯವಸ್ಥೆ, ಧ್ವನಿವರ್ಧಕ, ವೇದಿಕೆ ಪೀಠೋಪಕರಣಗಳು, ಆಸನಗಳ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಪ್ರೊ.ಬಿ.ಜಯಪ್ರಕಾಶಗೌಡ ಬೇಸರ ವ್ಯಕ್ತಪಡಿಸಿದರು.

ರಂಗ ಮಂದಿರಗಳ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದರೂ ಮುಂದೆ ನಿಂತು ಸರಿಪಡಿಸುವಂತಹ ಸಮರ್ಥರು ಯಾರೂ ಈಗಿಲ್ಲ. ರಂಗಮಂದಿರಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರಗಳೂ ನೀಡುತ್ತಿಲ್ಲ. ಜನಪ್ರತಿನಿಧಿಗಳಿಂದಲೂ ನೆರವು ಸಿಗುತ್ತಿಲ್ಲ. ಜನರಿಂದ ಹಣ ಸಂಗ್ರಹಿಸುವ ಅವಕಾಶವಿದ್ದರೂ ನಾಯಕತ್ವ ವಹಿಸುವವರಿಲ್ಲದೆ ರಂಗಭೂಮಿ ಚಟುವಟಿಕೆಗಳು ನಿಂತ ನೀರಾಗಿದೆ ಎಂದು ವಿಷಾದಿಸಿದರು.

ಎಲ್ಲ ಬೆಲೆಗಳು ಏರಿಕೆಯಾಗಿರುವುದರಿಂದ ರಂಗಮಂದಿರಗಳನ್ನು ನಿರ್ವಹಣೆ ಮಾಡುವುದೂ ಕಷ್ಟದ ಕೆಲಸವಾಗಿದೆ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಬೆಂಬಲವಾಗಿ ನಿಲ್ಲುವುದು ಅವಶ್ಯಕವಾಗಿದೆ. ಉತ್ತಮ ಕೆಲಸಗಳಿಗೆ ಜನರು ಬೆಂಬಲವಾಗಿ ನಿಲ್ಲುವುದಕ್ಕೆ ಸಿದ್ಧರಿದ್ದರೂ ಅವರ ಬಳಿ ಹೋಗುವವರಿಲ್ಲ. ರಂಗಭೂಮಿ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹದಾಯಕವಾಗಿ ನಿಲ್ಲುವವರಿಲ್ಲದೆ ಆಕರ್ಷಣೆ ಕಳೆದುಕೊಳ್ಳುತ್ತಿವೆ ಎಂದು ನುಡಿದರು.

ಗೋಷ್ಠಿಯಲ್ಲಿ ತಗ್ಗಹಳ್ಳಿ ವೆಂಕಟೇಶ್, ಮಂಜುಳಾ, ಎಚ್.ನಾಗಪ್ಪ ಇತರರಿದ್ದರು.