ಸಾರಾಂಶ
ಬ್ಯಾಡಗಿ: ದಿವಂಗತ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಜೀವನ ಚರಿತ್ರೆ ಆಧಾರಿತ ಡೈರೆಕ್ಟ್ ಆಕ್ಷನ್ ಎಂಬ ನಾಟಕ ಪ್ರದರ್ಶನ ಮೇ 26ರಂದು ಸಂಜೆ 4 ಗಂಟೆಗೆ ತಾಲೂಕಿನ ಕಾಗಿನೆಲೆ ಗ್ರಾಮದ ಕನಕದಾಸ ಕಲಾಭವನದಲ್ಲಿ ಜರುಗಲಿದೆ. ರೈತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮನವಿ ಮಾಡಿದರು.
ಪಟ್ಟಣದ ರೈತಸಂಘದ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಸದರಿ ವಿಷಯ ಪ್ರಸ್ತಾಪಿಸಿದ ಅವರು, ವಿಶ್ವಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರೈತ ಹೋರಾಟಕ್ಕೆ ನಾಂದಿ ಹಾಡಿದ ದೇಶದ ಮಹಾನ್ ನಾಯಕರಾಗಿದ್ದಾರೆ. ಕೃಷಿ ಮೇಲಿನ ನಷ್ಟಗಳ ಅಧ್ಯಯನ ಮತ್ತು ಅವುಗಳಿಗೆ ಪರಿಹಾರ, ಭವಿಷ್ಯದಲ್ಲಿ ರೈತರು ಎದುರಿಸಬೇಕಾದ ಸವಾಲುಗಳು, ರೈತಪರ ಚಿಂತನೆ, ಬೆಲೆ ಕುಸಿತ, ವಿಷಕಾರಿ ಬೀಜಗಳ ಪೂರೈಕೆ, ವಿದೇಶಿ ಕಂಪನಿಗಳು ರೈತರ ಮೇಲೆ ನಡೆಸುತ್ತಿರುವ ಪ್ರಹಾರ, ಕೃಷಿ ಕ್ಷೇತ್ರ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳ ಬೇಜವಾಬ್ದಾರಿ ವಿರುದ್ಧ ರೈತರ ಹಿತಕ್ಕಾಗಿ ತಮ್ಮ ಜೀವನವನ್ನೇ ಸವೆಸಿ ಕೊಂಡ ಓರ್ವ ದಿಟ್ಟ ನಾಯಕನ ಜೀವನ ಚರಿತ್ರೆಯು ನಾಟಕದ ರೂಪದಲ್ಲಿ ಹೊರಬರುತ್ತಿದ್ದು ಅದನ್ನು ವೀಕ್ಷಿಸುವ ಮೂಲಕ ಹೋರಾಟದ ನೈಜ ಘಟನೆಗಳನ್ನು ತಿಳಿದುಕೊಳ್ಳುವಂತೆ ಮನವಿ ಮಾಡಿದರು.ರೈತ ವಿರೋಧಿ ಧೋರಣೆಗಳ ವಿರುದ್ಧ ರಾಜಿಗೆ ಬಗ್ಗದ, ಸ್ಥಳದಲ್ಲೇ ಖಡಕ್ಕಾಗಿ ವಿರೋಧಿಸಿದ ನಿಷ್ಠಾವಂತ ಹೋರಾಟಗಾರರಾಗಿದ್ದು, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಡುಕು ಹುಟ್ಟಿಸುವ ಮೂಲಕ ಹೋರಾಟದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದವರಲ್ಲಿ ನಂಜುಂಡಸ್ವಾಮಿ ಒಬ್ಬರಾಗಿದ್ದು, ದೇಶದೆಲ್ಲೆಡೆ ನೂರಾರು ರೈತ ಹೋರಾಟಗಾರರನ್ನು ಹುಟ್ಟುಹಾಕಿ ಅವರಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಮನದಲ್ಲಿ ಕಿಚ್ಚು ಹಚ್ಚುವಂತೆ ಮಾಡಿದ ರೈತನಾಯಕರಾಗಿದ್ದು, ವಿದೇಶಿ ನೆಲದಲ್ಲಿಯೂ ಸಂಘಟನೆಗಳ ಮೂಲಕ ಪ್ರಸಿದ್ಧ ಪಡೆದ ಇವರ ಬದುಕು ಹೊಸ ಪೀಳಿಗೆಗೆ ಆದರ್ಶಪ್ರಾಯವಾಗಿದ್ದು ಇವೆಲ್ಲ ಸಂಗತಿಗಳನ್ನು ನಾಟಕದಲ್ಲಿ ಪ್ರದರ್ಶಿಸಲಾಗುತ್ತಿದ್ದು, ರೈತರು ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ರೈತ ಮುಖಂಡ ಗಂಗಣ್ಣ ಎಲಿ, ಜಾನ್ ಪುನೀತ್, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಪ್ಪನವರ, ಶಂಕರ ಮರಗಾಲ, ಚಿಕ್ಕಪ್ಪ ಛತ್ರದ, ಸಂಜೀವ ಬಿಷ್ಟಣ್ಣನವರ ಇದ್ದರು. ಕಾಗಿನೆಲೆಯಲ್ಲಿ ನಾಟಕ: ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದ ಕನಕ ಕಲಾಭವನದಲ್ಲಿ ಮೇ 26ರಂದು ಮಧ್ಯಾಹ್ನ 2 ಗಂಟೆಗೆ ಕಿಸಾನ್ ಸತ್ಯಾಗ್ರಹ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ಸಂಜೆ 4 ಗಂಟೆಗೆ ಸಾಹಿತಿ ಡಾ. ನಟರಾಜ ಹುಳಿಯಾರ್ ರಚಿಸಿದ ಡೈರೆಕ್ಟ್ ಆಕ್ಷನ್ ನಾಟಕ ಪ್ರದರ್ಶನ ಜರುಗಲಿದ್ದು, ನರೇಂದ್ರಬಾಬು ಕಬಡ್ಡಿ ನಿರ್ದೇಶನದಲ್ಲಿ ಖ್ಯಾತನಟ ಸಂಪತ್ ಮೈತ್ರೇಯ ನಂಜುಂಡಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ ಮತ್ತು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ.