30ರಂದು ಹೋರಾಟದ ನಡಿಗೆ ಹಾಸನದ ಕಡೆಗೆ

| Published : May 26 2024, 01:34 AM IST

ಸಾರಾಂಶ

ಬಿಜೆಪಿ-ಜೆಡಿಎಸ್ ನಾಯಕರು ಕೃತ್ಯ ಖಂಡಿಸಿಲ್ಲ. ಕನಿಷ್ಠ ಪಕ್ಷ ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿಲ್ಲ. ನ್ಯಾಯ ದೊರಕಿಸುವ ನಿಟ್ಟಿನಲ್ಲೂ ಪ್ರತಿಕ್ರಿಯೆ ನೀಡಿಲ್ಲ.

ಧಾರವಾಡ:

ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಗೂ ಸಂತ್ರಸ್ತರಿಗೆ ಭದ್ರತೆ ಮತ್ತು ಆತ್ಮಸ್ಥೈರ್ಯ ತುಂಬಲು ಜನಪರ ಚಳವಳಿಗಳ ಒಕ್ಕೂಟವು ಮೇ 30ಕ್ಕೆ ಹೋರಾಟದ ನಡಿಗೆ ಹಾಸನದ ಕಡೆಗೆ ಹಮ್ಮಿಕೊಂಡಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜನಪರ ಚಳವಳಿಗಳ ಒಕ್ಕೂಟದ ಸಂಯೋಜಕರಾದ ಶಂಕರ ಹಲಗತ್ತಿ, ಡಾ. ಶಿವಾನಂದ ಶೆಟ್ಟರ್, ತನ್ನ ಪ್ರಭಾವ ಬೀರಿ, ಒತ್ತಡ ಹಾಕಿ ನೂರಾರು ಮಹಿಳೆಯರನ್ನು ಲೈಂಗಿಕ ದಾಹಕ್ಕೆ ಬಳಸಿಕೊಂಡ ಪ್ರಜ್ವಲ್ ರೇವಣ್ಣ ನಗ್ನ ವಿಡಿಯೋ ಚಿತ್ರೀಕರಿಸಿರುವುದು ತೀವ್ರ ಖಂಡನೀಯ. ಇಂತಹ ನೀಚ ಕೃತ್ಯದಲ್ಲಿ ಭಾಗಿಯಾದ್ದರೂ, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ನಡೆ ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು.

ಬಿಜೆಪಿ-ಜೆಡಿಎಸ್ ನಾಯಕರು ಈ ಕೃತ್ಯ ಖಂಡಿಸಿಲ್ಲ. ಕನಿಷ್ಠ ಪಕ್ಷ ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿಲ್ಲ. ನ್ಯಾಯ ದೊರಕಿಸುವ ನಿಟ್ಟಿನಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಸಂತ್ರಸ್ತರು ತನಿಖಾ ಸಂಸ್ಥೆ ಮುಂದೆ ಹಾಜರಾಗದಂತೆ ತಡೆಯುವುದು ಯಾವ ನ್ಯಾಯ. ಈ ವಿಷಯದಲ್ಲಿ ಮೂರು ಪಕ್ಷಗಳು ರಾಜಕೀಯ ಮಾಡುತ್ತಿವೆಯೇ ಹೊರತು ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಸಂತ್ರಸ್ತರ ಪರ ಸಾಮಾಜಿಕ ಸಹಾನುಭೂತಿ, ಕಾಳಜಿ ತೋರುವ ಬದಲಿಗೆ ಆರೋಪಿ ರಾಜಕೀಯ, ಆರ್ಥಿಕ ಮತ್ತು ಜಾತಿ ಪ್ರಾಬಲ್ಯದ ಕಾರಣದಿಂದ ಸಂತ್ರಸ್ತರನ್ನು ತಿರಸ್ಕಾರ ಭಾವನೆಯಿಂದ ನೋಡುವುದು ಸಹ ಖಂಡನಾರ್ಹ ಎಂದರು.

ಒಟ್ಟಾರೆ ಈ ಪ್ರಕರಣದ ದಾರಿ ತಪ್ಪಿಸುವ ಹುನ್ನಾರ ನಡೆದಿದೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನನ್ನು ಹಿಡಿದು, ರಾಜ್ಯಕ್ಕೆ ತಂದು ಶಿಕ್ಷೆಗೆ ಗುರಿಪಡಿಸಬೇಕು. ಸಮಾಜಘಾತುಕ ವ್ಯಕ್ತಿಯೊಬ್ಬ ಅಷ್ಟೊಂದು ಮಹಿಳೆಯರನ್ನು ಅತ್ಯಾಚಾರ ಮಾಡಿ ಹೊರ ದೇಶದಲ್ಲಿ ಸುಖವಾಗಿದ್ದಾನೆ. ಹತ್ತಾರು ದಿನಗಳಾದರೂ ಆತನನ್ನು ಹೊರದೇಶದಿಂದ ಕರೆ ತರುವ ನಿಟ್ಟಿನಲ್ಲಿ ಹೇಳಿಕೊಳ್ಳುವ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆಯನ್ನು ಟೀಕಿಸಿದರು.

ಲೈಂಗಿಕ ದೌರ್ಜನ್ಯ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮೇ 30ರಂದು ಹಮ್ಮಿಕೊಂಡ ''''''''ಹೋರಾಟದ ನಡಿಗೆ ಹಾಸನದ ಕಡೆಗೆ'''''''' ಈ ಬೃಹತ್ ಪ್ರತಿಭಟನೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದರು.

ಸುದ್ದಿಗೋಷ್ಠಿಯಲ್ಲಿದ್ದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮೇ 28ರಂದು ಧಾರವಾಡದಲ್ಲಿ ಮೌನ ಮೆರವಣಿಗೆ ಸಹ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭಾವತಿ ದೇಸಾಯಿ, ಮಧುಲತಾ ಗೌಡರ, ಮುಸ್ತಾಕ್ ಹಾವೇರಿಪೇಟಿ, ಬಿ.ಐ. ಈಳಗೇರ, ಭುವನಾ ಬಳ್ಳಾರಿ ಇದ್ದರು.