ಹ್ಯಾಂಡ್ ಪೋಸ್ಟ್ ನಲ್ಲಿ ಜೀವಿಕ ದಿನಾಚರಣೆ

| Published : Sep 17 2024, 12:49 AM IST

ಸಾರಾಂಶ

ಸಾವಿರಾರು ಮಂದಿ ಇಂದು ಜೀತದಿಂದ ವಿಮುಕ್ತಿ ಪಡೆದಿದ್ದಾರೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ಹ್ಯಾಂಡ್ ಪೋಸ್ಟ್ ನ ಜೀವಿಕ ತರಬೇತಿ ಕೇಂದ್ರದಲ್ಲಿ ಸೋಮವಾರ ಜೀವಿಕ ದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು 3ನೇ ತರಗತಿ ವಿದ್ಯಾರ್ಥಿ ಯು.ಎಸ್. ಸುನೋಜ್ ವಾಚಿಸುವ ಮೂಲಕ ಉದ್ಘಾಟಿಸಲಾಯಿತು.

ಸಂಸ್ಥೆಯ ಜಿಲ್ಲಾ ಸಂಚಾಲಕ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವಿಕ ಸಂಘಟನೆ ಸಂಸ್ಥಾಪಕ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ನೇತೃತ್ವದಲ್ಲಿ ರಾಜ್ಯಾದ್ಯಂತ ಜೀವಿಕ ಜೀತದಾಳು ಮತ್ತು ಶೋಷಿತ ಸಮುದಾಯಗಳ ವಿಮೋಚನೆಗಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಮಂದಿ ಇಂದು ಜೀತದಿಂದ ವಿಮುಕ್ತಿ ಪಡೆದಿದ್ದಾರೆ ಮತ್ತು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ ಎಂದು ಜೀವಿಕ ಸಂಘಟನೆ ಪ್ರಾರಂಭದ ದಿನಗಳನ್ನ ಮೆಲುಕು ಹಾಕಿದರು.

ಜೀತ ಮುಕ್ತರಾದ ವಡ್ಡರಪಾಳ್ಯ ಗೋಪಾಲ್. ಕಲ್ಲಂಬಾಳು ಮಂಜುನಾಥ್ ಮಾತನಾಡಿ, ನಾವು ಬಾಲ್ಯದಿಂದಲೂ ಕೇವಲ ಐದುನೂರು ಸಾವಿರಕ್ಕೆ ವರ್ಷವೆಲ್ಲಾ ದುಡಿದು ಕೇವಲ ಊಟ ಬಟ್ಟೆಗಾಗಿ ಜೀವ ಸವೆಸುತ್ತಾ ಸ್ನಾನಕ್ಕೂ ಬಿಡದೇ, ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ನೋಡಲು ಬಿಡದೆ ಹಗಲು ರಾತ್ರಿ ಮಾಲೀಕನ ಮನೆಯಲ್ಲಿ ನಮ್ಮ ಜೀವವನ್ನು ಸೆವೆಸುತ್ತಿದ್ದೆವು.

ಆ ಕಾಲಕ್ಕೆ ಜೀವಿಕ ಸಂಘಟನೆ ಬೆಳಕಾಗಿ ಬಂದು ಇಂದು ನಾಗರಿಕ ಸಮಾಜ ನಮ್ಮನ್ನು ಮನುಷ್ಯರಾಗಿ ಕಾಣುವಂತೆ ಮಾಡಿದೆ ಎಂದು ತಮ್ಮ ಜೀತದ ಬದುಕಿನ ಅನುಭವ ಹಂಚಿಕೊಂಡರು.

ಪ್ರಗತಿಪರ ರೈತ ಮಲಾರ ಪುಟ್ಟಯ್ಯ ಮಾತಾನಾಡಿ, ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿ ಜೀತದಾಳುಗಳನ್ನ ಬಿಡುಗಡೆಗೊಳಿಸಿ ಸಮಾಜ ಮುಖ್ಯ ವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಜೀವಿಕ ಮತ್ತು ಕಿರಣ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಬಳಿಕ ಚಾ. ನಂಜುಂಡ ಮೂರ್ತಿ, ಅಕ್ಬರ್ ಪಾಷ, ಪುರಸಭಾ ಸದಸ್ಯ ಎಚ್.ಸಿ. ನರಸಿಮೂರ್ತಿ, ಎಚ್.ಬಿ. ಬಸವರಾಜ್, ಚೌಡಳ್ಳಿ ಜವರಯ್ಯ, ತಾಪಂ ಮಾಜಿ ಅಧ್ಯಕ್ಷ ಗೋಪಾಲ್ ಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಇಟ್ನಾ ರಾಜಣ್ಣ, ಸರಗೂರು ಶಿವಣ್ಣ ಮೊದಲಾದವರು ಜೀವಿಕ ಸಂಘಟನೆ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ ಮಾತನಾಡಿ, ಜೀವಿಕ ಸುಮಾರು ಮೂವತೈದು ವರ್ಷಗಳ ಹಿಂದೆ ಪ್ರಾರಂಭವಾಗಿ ಇಂದು ತಾಲೂಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಮತ್ತು ನ್ಯಾಯಯುತ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಜೀತದಾಳು ಮತ್ತು ಯಾವುದೇ ಸಮಾಜದ ನೊಂದ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮವನ್ನ ಚಂದ್ರಶೇಖರ ಮೂರ್ತಿ ನಿರ್ವಹಿಸಿ ಶಿವರಾಜ್ ಜೀವಿಕ ಗುರಿ ಉದ್ದೇಶವನ್ನು ಓದಿ ತಿಳಿಸಿದರು.