ಒಂದೆಡೆ ಸಂತಸ, ಮತ್ತೊಂದೆಡೆ ಬೆಳೆ ನಾಶದಿಂದ ರೈತರಿಗೆ ಸಂಕಷ್ಟ..!

| Published : May 05 2024, 02:00 AM IST

ಒಂದೆಡೆ ಸಂತಸ, ಮತ್ತೊಂದೆಡೆ ಬೆಳೆ ನಾಶದಿಂದ ರೈತರಿಗೆ ಸಂಕಷ್ಟ..!
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಪಟ್ಟಣ ಗ್ರಾಮದ ವಾಸಿ ಪುಟ್ಟೇಗೌಡರಿಗೆ ಸೇರಿದ ಒಂದು ಎಕ್ಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದು ಫಸಲು ಕಡಿದು ಮಾರಾಟ ಮಾಡುವ ಸಂದರ್ಭದಲ್ಲಿ ಬಿರುಗಾಳಿಗೆ ಅರ್ಧ ಎಕ್ಕೇರಲ್ಲಿದ್ದ ಬಾಳೆ ಗಿಡಗಳು ಗಾಳಿ ರಭಸಕ್ಕೆ ಮುರಿದು ಬಿದ್ದು ಸುಮಾರು 2 ಲಕ್ಷ ರು.ನಷ್ಟ ಸಂಭವಿಸಿದೆ ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಹೋಬಳಿಯಾದ್ಯಂತ ಶುಕ್ರವಾರ ಸಂಜೆ ಸುರಿದ ಅಲ್ಪ ಮಟ್ಟದ ಮಳೆಯಿಂದ ಜನ, ಜಾನುವಾರುಗಳಿಗೆ ನೆರವಾದರೆ, ಬಿರುಗಾಳಿಯಿಂದ ವೀಳ್ಯೆದೆಲೆ ತೋಟ, ಬಾಳೆ ಫಸಲು ನಾಶವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಭೀಕರ ಬರಗಾಲದಿಂದ ವರುಣನ ಅವಕೃಪೆಯಿಂದ ಜನ-ಜಾನುವಾರುಗಳಿಗಲ್ಲದೇ ಹಕ್ಕಿ ಪಕ್ಷಿಗಳಿಗೂ ಕುಡಿಯುವ ನೀರಿಗೂ ತೊಂದರೆಯಾಗಿತ್ತು. ಶುಕ್ರವಾರ ಸಂಜೆ ಹಲವೆಡೆ ಸಾಧಾರಣ ಮಳೆ ಬಿದ್ದ ಹಿನ್ನೆಲೆಯಲ್ಲಿ ಕೃಷಿಕನ ಮೊಗದಲ್ಲಿ ಸಂತಸದ ನಗೆ ಕಂಡು ಬಂತು.

ಮಳೆ ಜೊತೆ ಬಿದ್ದ ಆಲಿಕಲ್ಲು ಹಾಗೂ ಬಿರುಗಾಳಿಗೆ ಹಲವು ರೈತರ ಬೆಳೆಗಳು ನಾಶವಾಗಿವೆ. ತೀವ್ರ ಪ್ರಮಾಣದ ಗುಡುಗು ಹಾಗೂ ಸಿಡಿಲಿಗೆ ಮಾವಿನ ಫಸಲು ಹಾನಿಗೀಡಾದರೇ, ತೆಂಗು ಹಾಗೂ ಬಾಳೆ ಗಿಡಗಳು ನೆಲ್ಲಕ್ಕುರುಳಿದ ಪರಿಣಾಮ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.

ಲಿಂಗಪಟ್ಟಣ ಗ್ರಾಮದ ವಾಸಿ ಪುಟ್ಟೇಗೌಡರಿಗೆ ಸೇರಿದ ಒಂದು ಎಕ್ಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದು ಫಸಲು ಕಡಿದು ಮಾರಾಟ ಮಾಡುವ ಸಂದರ್ಭದಲ್ಲಿ ಬಿರುಗಾಳಿಗೆ ಅರ್ಧ ಎಕ್ಕೇರಲ್ಲಿದ್ದ ಬಾಳೆ ಗಿಡಗಳು ಗಾಳಿ ರಭಸಕ್ಕೆ ಮುರಿದು ಬಿದ್ದು ಸುಮಾರು 2 ಲಕ್ಷ ರು.ನಷ್ಟ ಸಂಭವಿಸಿದೆ ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ವೀಳ್ಯೆದೆಲೆ ತೋಟ ನಾಶ, ಮರಗಲು ಬಿದ್ದು ಅಪಾರ ನಷ್ಟ:

ಬಾಳೆಹೊನ್ನಿಗ ಗ್ರಾಮದ ನೂರಾರು ರೈತರಿಗೆ ಆಸರೆಯಾಗಿದ್ದ ವೀಳ್ಯೆದೆಲೆ ತೋಟ ನಾಶವಾಗಿ ಕೋಟ್ಯಾಂತರ ರು. ನಷ್ಟ ಸಂಭವಿಸಿದೆ. ಬಿರುಗಾಳಿಗೆ ನಲುಗಿದ ವೀಳ್ಯೆದೆಲೆ ತೋಟಕ್ಕೆ ಆಸರೆಯಾಗಿದ್ದ ವಿವಿಧ ಜಾತಿಯ ಮರಗಳು ಮುರಿದು ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಗ್ರಾಮದ ಬಹುತೇಕ ಕುಟುಂಬಗಳು ವೀಳ್ಯೆದೆಲೆ ಬೇಸಾಯವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಪ್ರಾಥಮಿಕ ಹಂತದಿಂದ ಎಲೆ ಕಟಾವು ಹಂತಕ್ಕೆ ಬರಲು ಸುಮಾರು ಒಂದು ವರ್ಷ ಕಾಲಾವಧಿ ಬೇಕಾಗುತ್ತದೆ. ಫಸಲಿಗೆ ಬಂದಿದ್ದ ತೋಟ ನಾಶವಾಗಿರುವ ಹಿನ್ನೆಲೆಯಲ್ಲಿ ಪ್ರತಿ ರೈತ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಾಂತ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ಬಿ.ಎಸ್ .ಮಹೇಶ್ ಕುಮಾರ್ ಮಾತನಾಡಿ, ಬಾಳೆಹೊನ್ನಿಗ ಗ್ರಾಮದಲ್ಲಿ ವಿಳ್ಯದೆಲೆ ಬೆಳೆಗಾರರು ಹೆಚ್ಚು ಸುಮಾರು ನೂರಾರು ಕುಟುಂಬಗಳು ಬೆಳೆಯ ಆಸರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ, ಶುಕ್ರವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ ಸುಮಾರು ಲಕ್ಷಾಂತರ ರು ನಷ್ಟ ಸಂಭವಿಸಿದೆ. ಲೂಕು ಮತ್ತು ಜಿಲ್ಲಾಡಳಿತ ಹಾಗೂ ಸರ್ಕಾರ ಇದರ ಬಗ್ಗೆ ಗಮನಹರಿಸಿ ಸಂಕಷ್ಟಕ್ಕೆ ಸಿಲುಕಿರುವ ವೀಳ್ಯದೆಲೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಬೆಳೆಗಾರರ ಪರ ನಿಲ್ಲಬೇಕಿದೆ ಎಂದು ಒತ್ತಾಯಿಸಿದರು.

ದಳವಾಯಿ ಕೋಡಿಹಳ್ಳಿ ಗ್ರಾಪಂ ಸದಸ್ಯ ಆನಂದ್ ಕುಮಾರ್ ಮಾತನಾಡಿ, ಇಷ್ಟು ದಿನ ಮಳೆಗಾಗಿ ಕಾಯುತ್ತಿದ್ದೆವು. ಆದರೆ, ಮಳೆ ಜೊತೆಗೆ ಬಿರುಗಾಳಿಯಿಂದ ಬೆಳೆ ನಾಶವಾಗಿದೆ. ವ್ಯವಸಾಯ ಮಾಡಲು ಸಾಲ ಮಾಡಿದ್ದು ಬೆಳೆ ಫಸಲು ಬಂದ ನಂತರ ಮಾರಾಟ ಮಾಡಿ ಸಾಲವನ್ನುತೀರಿಸಿ ಜೀವನ ಸಾಗಿಸೋಣ ಎಂದರೆ ಪರಿಸರದ ವಿಕೋಪಕ್ಕೆ ವೀಳ್ಯದೆಲೆ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಕಠಿಣ ಪರಿಸ್ಥಿತಿ ಎದುರಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ತೋಟಗಾರಿಕೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಎಸ್.ಶಾಂತರಾಜು ಮತ್ತು ಅಧಿಕಾರಿ ಚೇತನ್ ಬಾಳೆಹೊನ್ನಿಗ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ವೀಳ್ಯದೆಲೆ ಬೆಳೆಗಾರರ ಬಳಿ ಮಾಹಿತಿ ಪಡೆದರು. ಮತ್ತು ಇಲಾಖೆ ವತಿಯಿಂದ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.