ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಾಸಕ ಡಾ. ಶ್ರೀನಿವಾಸ್

| Published : Jan 28 2024, 01:16 AM IST

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಾಸಕ ಡಾ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ಪಟ್ಟಣದ ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ವಿನಾಯಕ ಶಾಲೆಯ ವಿದ್ಯಾರ್ಥಿಗಳು ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಅವರ ಭಾವಚಿತ್ರ ಹಿಡಿದು ಜೀವಾ ಜೀವಾ ನನ್ನ ಜೀವ ಕಣೋ... ಹಾಡಿಗೆ ನೃತ್ಯ ಮಾಡಿದರು. ಅದನ್ನು ಕಂಡು ಶಾಸಕ ಡಾ. ಶ್ರೀನಿವಾಸ ಬಿಕ್ಕಿ ಬಿಕ್ಕಿ ಅತ್ತರು.

ಕೂಡ್ಲಿಗಿ: ಪಟ್ಟಣದ ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ವಿನಾಯಕ ಶಾಲೆಯ ವಿದ್ಯಾರ್ಥಿಗಳು ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಅವರ ಭಾವಚಿತ್ರ ಹಿಡಿದು ನೃತ್ಯ ಮಾಡಿದ್ದು ನೋಡಿ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ ಅವರು ಬಿಕ್ಕಿ ಬಿಕ್ಕ ಅತ್ತ ಘಟನೆ ನಡೆದಿದೆ.ಜೀವಾ ಜೀವಾ ನನ್ನ ಜೀವ ಕಣೋ... ಈ ಹಾಡಿಗೆ ವಿದ್ಯಾರ್ಥಿಗಳು ಕೂಡ್ಲಿಗಿ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಭಾವಚಿತ್ರವಿರುವ ಕಟೌಟ್ ಹಿಡಿದು ನೖತ್ಯ ಮಾಡಿದರು. ಕಳೆದ ವರ್ಷ ನಿಧನರಾದ ತಮ್ಮ ತಂದೆಯನ್ನು ನೆನಪಿಸಿಕೊಂಡು ವೇದಿಕೆಯಲ್ಲಿಯೇ ಶಾಸಕರು ಬಿಕ್ಕಿ‌ಬಿಕ್ಕಿ ಅತ್ತರು. ಅಭಿಮಾನಿಗಳು ಶಾಸಕರನ್ನು ಸಂತೈಸಿದರು.

ಎನ್‌.ಟಿ. ಬೊಮ್ಮಣ್ಣ ಅವರು ಕೂಡ್ಲಿಗಿ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದರೂ ಕೊನೆಯ ಅವಧಿಯಲ್ಲಿ 3 ಬಾರಿ ಸೋತು ಶಾಸಕರಾಗುವ ಆಸೆ ಕೈಗೂಡಲಿಲ್ಲ. ತಂದೆ ನಿಧನದ ಆನಂತರ ಮಗ ಡಾ. ಎನ್.ಟಿ. ಶ್ರೀನಿವಾಸ್ ಅವರನ್ನು ಕೂಡ್ಲಿಗಿ ಕ್ಷೇತ್ರದ ಜನತೆ ಭಾರೀ ಬಹುಮತದಿಂದ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಕೊನೆಯ ದಿನಗಳಲ್ಲಿ ಅಪ್ಪ ಶಾಸಕರಾಗುವ ಕನಸು ಕನಸಾಗಿಯೇ ಉಳಿಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ₹400 ಕೋಟಿ ಅನುದಾನ ತರಲು ಸಜ್ಜಾಗಿದ್ದು, ಸದ್ಯದಲ್ಲೇ ಅನುಮೋದನೆ ದೊರೆಯಲಿದೆ ಎಂದರು. ಕೂಡ್ಲಿಗಿಯ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಕೆರೆ ನೀರು ತುಂಬಿಸುವ ಯೋಜನೆ ಈಗಾಗಲೇ ಶೇ. 90 ಕಾಮಗಾರಿ ಮುಗಿದಿದ್ದು, ಉಳಿದ ಶೇ. 10 ಕಾಮಗಾರಿ ತೊಡಕಾಗಿತ್ತು. ಅದನ್ನು ಈಗಾಗಲೇ ಸರಿಪಡಿಸಲಾಗಿದೆ. ಜೂನ್ ತಿಂಗಳಲ್ಲಿ ನೀರು ತರುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಗುಡೇಕೋಟೆ ಉತ್ಸವಕ್ಕೆ ಸಜ್ಜು: ಹುಡೇಂನಲ್ಲಿ ಏಕಲವ್ಯ ವಸತಿ ಶಾಲೆ, ಗುಂಡಿನಹೊಳೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜ್, ಆರ್.ಕೆ. ಶೆಟ್ರು ಅವರು ನೀಡಿರುವ ನಿವೇಶನದಲ್ಲಿ ಕನ್ನಡ ಭವನ, ಗುರುಗಳ ನೆನಪಿಗೆ ಗುರುಭವನ ನಿರ್ಮಾಣ ಮತ್ತು ಬಹುಮುಖ್ಯವಾಗಿ ಸರ್ಕಾರದ ಅನುದಾನದಲ್ಲಿ ವೀರವನಿತೆ ಓಬವ್ವಳ ತವರೂರು ಹಾಗೂ ಗುಡೇಕೋಟೆ ಪಾಳೇಗಾರರ ಆಳಿದ ನಾಡಾಗಿರುವ ಗುಡೇಕೋಟೆ ಉತ್ಸವಕ್ಕೆ ಸರ್ಕಾರದ ಅನುದಾನ ಬಿಡುಗಡೆ ಮಾಡಿದೆ. ಗುಡೇಕೋಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ನಿರುದ್ಯೋಗ ಸಮಸ್ಯೆ ಅರಿತು ಕೂಡ್ಲಿಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕೌಶಲ್ಯeಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವೆ. ಅಲ್ಲದೇ ಐದಕ್ಕೂ ಹೆಚ್ಚು ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಹುತಾತ್ಮ ಸ್ಮಾರಕಕ್ಕೆ ತೆರಳಿ ಪುಷ್ಪಗುಚ್ಛ ಅರ್ಪಿಸಿದರು. ಆನಂತರ ಕೂಡ್ಲಿಗಿ ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನೆರವೇರಿಸಿ 75ನೇ ಗಣರಾಜ್ಯೋತ್ಸವದ ಸಂದೇಶ ಸಾರಿದರು. ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ, ಪ್ರಾಚಾರ್ಯರಾದ ಡಾ. ಕೊತ್ಲಮ್ಮ, ಇಒ ರವಿಕುಮಾರ, ಮುಖ್ಯಾಧಿಕಾರಿ ಫಿರೋಜ್ ಖಾನ್, ಸಿಪಿಐ ಸುರೇಶ ತಳವಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪಪಂ ಎಲ್ಲ ಸದಸ್ಯರು, ಭಾಗವಹಿಸಿದ್ದರು. ಗುಂಡುಮುಣುಗು ಲಕ್ಷ್ಮಿ ಸೇರಿದಂತೆ ಸುಮಾರು 30 ಸಾಧಕರನ್ನು ಸನ್ಮಾನಿಸಲಾಯಿತು.