ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಸಿ. ಜನರಲ್ ಆಸ್ಪತ್ರೆಯನ್ನು ₹152 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಶನಿವಾರ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ಸಮರ್ಪಿಸಿ ಮಾತನಾಡಿದ ಅವರು, ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸದಾಗಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮತ್ತು ಹಳೇಯದಾಗಿರುವ ಬೋಧಕ ವಿಭಾಗದ ಕಟ್ಟಡ, ಶವಾಗಾರ, ಅಡುಗೆ ಮನೆ, ಲಾಂಡ್ರಿ, ತ್ಯಾಜ್ಯ ಸಂಸ್ಕರಣೆ, ನಿರ್ವಹಣೆ ಘಟಕಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಒಟ್ಟು ₹152 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆಯಿಂದ ಸಲ್ಲಿಸಲಾಗಿದೆ. ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
ಸಮಾಜದಲ್ಲಿ ಬಡವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಹೀಗಾಗಿ, ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಸರ್ಕಾರದಿಂದ ಪ್ರಮುಖವಾಗಿ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಎಲ್ಲರಿಗೂ ತಲುಪಿವೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈ ಹಿಂದೆ ಬಹುಬಳಕೆಯ ಡಯಾಲೈಸರ್ ಯಂತ್ರಗಳ ಬಳಕೆಯಿಂದ ರೋಗಿಗಳಿಗೆ ಸೋಂಕು ಉಂಟಾಗುವುದು ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದವು. ಈ ಹಿನ್ನೆಲೆ ತಜ್ಞರ ಜೊತೆ ಸಭೆ ನಡೆಸಿ ಏಕಬಳಕೆಯ ಡಯಾಲೈಸರ್ ಅಳವಡಿಸಲು ತೀರ್ಮಾನಿಸಲಾಯಿತು. ಒಟ್ಟು 800 ಡಯಾಲಿಸಿಸ್ ಯಂತ್ರಗಳಿಂದ ರಾಜ್ಯದ 6 ಸಾವಿರ ರೋಗಿಗಳಿಗೆ ಉಚಿತ ಸೇವೆ ಲಭ್ಯವಾಗುತ್ತದೆ. ಇದು ದೇಶದಲ್ಲೇ ಮಾದರಿ ಎಂದರು.
ಉಚಿತ ಡಯಾಲಿಸಿಸ್ ಸೇವೆಗೆ ವಾರ್ಷಿಕ ₹108 ಕೋಟಿ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸುತ್ತವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ಸಮರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾರ್ಡ್‌ನಲ್ಲಿ ರೋಗಿಗಳೊಂದಿಗೆ ಮಾತನಾಡಿದರು. ಹಿಂದಿಗಿಂತ ಈಗ ಡಯಾಲಿಸಿಸ್ ಸೇವೆ ಉತ್ತಮವಾಗಿದೆ ಎಂದು ರೋಗಿಗಳು ತೃಪ್ತಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ। ವೈ.ನವೀನ್ ಭಟ್ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))