ಸಾರಾಂಶ
ಜ. 26, 27 ಹಾಗೂ 28 ಮೂರು ದಿನಗಳು ರಜೆ ಇರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಹಂಪಿಯ ಕಡೆ ಮುಖ ಮಾಡಿದ್ದಾರೆ.
ಹೊಸಪೇಟೆ: ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಶನಿವಾರ ತಂಡೋಪತಂಡವಾಗಿ ಆಗಮಿಸಿ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಹಂಪಿ ಸ್ಮಾರಕಗಳ ವೀಕ್ಷಣೆಗೆ ಒಂದೇ ದಿನ 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಇದರಿಂದ ಹಂಪಿ ಸ್ಮಾರಕಗಳ ಬಳಿ ಪ್ರವಾಸಿಗರ ದಂಡೇ ಸೇರಿತ್ತು.
ಜ. 26, 27 ಹಾಗೂ 28 ಮೂರು ದಿನಗಳು ರಜೆ ಇರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಹಂಪಿಯ ಕಡೆ ಮುಖ ಮಾಡಿದ್ದಾರೆ. ಕೋವಿಡ್ ಬಳಿಕ ವಿಶ್ವಪ್ರಸಿದ್ಧ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧಾವಿಸಿ ಬರುತ್ತಿದ್ದಾರೆ. ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಮಹಾನವಮಿ ದಿಬ್ಬ, ಆನೆಸಾಲು, ರಾಣಿಸ್ನಾನ ಗೃಹ, ಹಜಾರ ರಾಮ ಮಂದಿರ, ಮಾತಂಗ ಪರ್ವತ, ವಿಜಯ ವಿಠಲ ದೇವಸ್ಥಾನ, ಪುರಂದರ ಮಂಟಪ, ಎದುರು ಬಸವಣ್ಣ, ಸಾಸಿವೆಕಾಳು ಗಣಪ, ಕಡಲೆ ಕಾಳು ಗಣಪ, ಉಗ್ರ ನರಸಿಂಹ, ಬಡವಿ ಲಿಂಗ ಸ್ಮಾರಕ ಸೇರಿದಂತೆ ವಿವಿಧ ಸ್ಮಾರಕಗಳ ಬಳಿ ಪ್ರವಾಸಿಗರ ದಂಡು ಕಂಡುಬಂದಿತು.ಹಂಪಿ ಸುತ್ತಮುತ್ತಲಲ್ಲಿರುವ ಜೂಲಾಜಿಕಲ್ ಪಾರ್ಕ್, ಕರಡಿ ಧಾಮ, ತುಂಗಭದ್ರಾ ಜಲಾಶಯ, ಅಂಜನಾದ್ರಿ ಬೆಟ್ಟ, ಗುಂಡಾ ಫಾರೆಸ್ಟ್ ಸೇರಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಸೇರಿದ್ದರು.
ಹಂಪಿ ಉತ್ಸವ: ಕುಸ್ತಿ ಸ್ಪರ್ಧೆಗೆ ಹೆಸರು ನೋಂದಾಯಿಸಿಹಂಪಿ ಉತ್ಸವ-2024ರ ಪ್ರಯುಕ್ತ ಫೆ. 3ರಂದು ಬೆಳಗ್ಗೆ 10 ಗಂಟೆಗೆ ಶ್ರೀವಿಜಯ ವಿದ್ಯಾರಣ ಪ್ರೌಢಶಾಲೆ ಮೈದಾನ ಹೊಸ ಮಲಪನಗುಡಿಯಲ್ಲಿ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಮತ್ತು ಜಿಲ್ಲಾ ಮಟ್ಟದ ಪುರುಷ ಕುಸ್ತಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕುಸ್ತಿಯ 4 ವಿಭಾಗದ ವಿವರಗಳು: ರಾಜ್ಯ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ, 57-65 ಕೆಜಿ, 66-74 ಕೆಜಿ, 75-85 ಕೆಜಿ, 86 ಕೆಜಿ ಮೇಲ್ಪಟ್ಟು ಸಂಘಟಿಸಲಾಗುವುದು. ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ 50 ಕೆಜಿ, 51-54 ಕೆಜಿ, 55-57 ಕೆಜಿ, 58 ಕೆಜಿ ಮೇಲ್ಪಟ್ಟು ಸಂಘಟಿಸಲಾಗುವುದು. ಜಿಲ್ಲಾ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯು 57-65 ಕೆಜಿ, 66-74 ಕೆಜಿ, 75-85 ಕೆಜಿ, 86 ಕೆಜಿ ಮೇಲ್ಪಟ್ಟು ನಡೆಯಲಿದೆ.ಸ್ಫರ್ಧೆಗೆ ಭಾಗವಹಿಸುವ ಕ್ರೀಡಾಪಟುಗಳು ಫೆ. 3ರ ಬೆಳಗ್ಗೆ 8ರಿಂದ 10 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ಬಹುಮಾನ ನೀಡಲಾಗುತ್ತದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9972552385, 9164693882, 9483480101ಗೆ ಸಂಪರ್ಕಿಸಲು ತಿಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.