ಸಾರಾಂಶ
ಬರಗಾಲದಂತಹ ಸಮಯದಲ್ಲಿ ರೈತರು ನೀರು ಕೊಡುವುದೇ ಪುಣ್ಯದ ಕೆಲಸ. ಇಂತಹ ಸಾಮಾನ್ಯ ಜ್ಞಾನ ಕೂಡ ತಮಗಿಲ್ಲವೇ?.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಜನರಿಗೆ ಕುಡಿಯುವ ನೀರು ಕೊಡಲು ಮುಂದಾದ ಗ್ರಾಮೀಣ ಪ್ರದೇಶದ ರೈತರ ಬೋರ್‌ವೆಲ್‌ಗೆ ಹೆಸ್ಕಾಂ ಅಧಿಕಾರಿಗಳು ಮೀಟರ್ ಅಳವಡಿಸಲು ಮುಂದಾಗುತ್ತಿರುವ ಕುರಿತು ದೂರು ಕೇಳಿ ಬಂದಿವೆ. ಬರಗಾಲದಂತಹ ಸಮಯದಲ್ಲಿ ರೈತರು ನೀರು ಕೊಡುವುದೇ ಪುಣ್ಯದ ಕೆಲಸ. ಇಂತಹ ಸಾಮಾನ್ಯ ಜ್ಞಾನ ಕೂಡ ತಮಗಿಲ್ಲವೇ?ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.
ಗ್ರಾಮೀಣ ನೀರು ಸರಬರಾಜು ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಎಂಜಿನಿಯರ್ ಸುರೇಶ ಬೇಡರ, ರೈತರ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಗ್ರಾಮದ ಜನರಿಗೆ ನೀರು ಕೊಡಬೇಕಾಗುತ್ತದೆ. ಆದರೆ ಹೆಸ್ಕಾಂ ಅಧಿಕಾರಿಗಳು ಪಡೆದಂತಹ ಕೊಳವೆಬಾವಿಗಳಿಗೆ ಮೀಟರ್ ಅಳವಡಿಸಲು ಮುಂದಾಗುತ್ತಿರುವುದರಿಂದ ರೈತರು ಅನುಮತಿ ಕೊಡಲು ಹಿಂದೇಟು ಹಾಕುತ್ತಿರುವುದಾಗಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ, ಇಂತಹ ಬೇಜವಾಬ್ದಾರಿ ವರ್ತನೆಯಿಂದ ಸರ್ಕಾರದ ಹೆಸರಿಗೆ ಕಳಂಕ ಬರಲಿದೆ. ಕೂಡಲೇ ಇಂತಹ ಘಟನೆಗೆ ಅವಕಾಶ ನೀಡಬಾರದು. ಹೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಬದಲು ಮತ್ತಷ್ಟು ಉಲ್ಬಣಗೊಳಿಸುವುದು ಎಷ್ಟು ಸಮಂಜಸ. ಇಂದಿನಿಂದ ಯಾವುದೇ ಮೀಟರ್ ಅಳವಡಿಸಿದಂತೆ ಸೂಚಿಸಿದರು.ಕುಡಿಯುವ ನೀರಿಗೆ ಅನುದಾನ ಒದಗಿಸುವ ವಿಚಾರದಲ್ಲಿ ಡಿಸಿ ಹಾಗೂ ಸಿಎಸ್ ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅನುದಾನ ಕೊಡುತ್ತೇವೆ ಎಂದರೆ, ಇನ್ನೊಬ್ಬರು ಇಲ್ಲವೆನ್ನುತ್ತಿದ್ದಾರೆ. ಕೂಡಲೇ ಬ್ಯಾಡಗಿ ಮತಕ್ಷೇತ್ರದ ಕುಡಿಯುವ ನೀರಿನ ಸಂಪೂರ್ಣ ಚಿತ್ರಣವನ್ನು ನೀಡುವಂತೆ ಶಾಸಕ ಶಿವಣ್ಣನವರ ಸೂಚಿಸಿದರು.
ಮುದೇನೂರು ರೈಸಿಂಗ್ ಲೈನ್‌ನಿಂದ 7.1 ಎಂ.ಎಲ್.ಡಿ. ಕಚ್ಚಾ ನೀರು ಬ್ಯಾಡಗಿ ಪುರಸಭೆ ಲೆಕ್ಕದಲ್ಲಿ ಸರಬರಾಜು ಆಗುತ್ತಿದೆ. ಆದರೆ ಕದರಮಂಡಲಗಿ, ಅಸುಂಡಿ, ಹೂಲಿಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಅನವಶ್ಯಕ ನೀರು ಪೋಲಾಗುತ್ತಿದ್ದು, ಬ್ಯಾಡಗಿಗೆ ಬರುವಲ್ಲಿ 3.5 ಎಂ.ಎಲ್.ಡಿ. ಕೂಡ ಉಳಿಯುತ್ತಿಲ್ಲ. ಹೀಗಾಗಿ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಕಷ್ಟಸಾಧ್ಯವಾಗಿದೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಸಭೆಯ ಗಮನಕ್ಕೆ ತಂದರು.ರಾಣಿಬೆನ್ನೂರ, ಹಾವೇರಿ, ಬ್ಯಾಡಗಿ ತಾಲೂಕಿನ ರಸ್ತೆಗಳಲ್ಲಿ ಎಲ್ಲಿಯೂ ಜಂಗಲ್ ಕಟ್ಟಿಂಗ್ ನಡೆದಿಲ್ಲ. ಗುಣಮಟ್ಟ ಇಲ್ಲದೇ ಮಾಡಿದ ರಸ್ತೆ ಕಾಮಗಾರಿಗಳಲ್ಲಿ ತಗ್ಗು ಗುಂಡಿಗಳಿವೆ. ಅವುಗಳನ್ನೂ ಕೂಡ ಮುಚ್ಚಿಲ್ಲ, ಯಾವುದೇ ರಸ್ತೆಗೂ ಹೋದರೂ ಇಂತಹ ಸಮಸ್ಯೆಗಳನ್ನು ನಾವೆಲ್ಲರೂ ಅನುಭವಿಸಬೇಕಾಗಿದೆ. ಕೂಡಲೇ ಎಲ್ಲ ಕಡೆ ಪಾಟ್ ವಾಲ್ ಮುಚ್ಚುವಂತೆ ಪಿಡಬ್ಲೂಡಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ನಾಮ ನಿರ್ದೇಶಿತ ಸದಸ್ಯರಾದ ಪರಮೇಶಗೌಡ ತೆವರಿ, ನಾಗನಗೌಡ ಪಾಟೀಲ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ತಹಸೀಲ್ದಾರ್ ಫಿರೋಜ್ ಶಾ ತುಮ್ಮನಕಟ್ಟಿ ಸೇರಿದಂತೆ ಬ್ಯಾಡಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಕಾಗಿನೆಲೆ ಸುತ್ತಮುತ್ತಲ ಪ್ರದೇಶದಲ್ಲಿ ನರ್ಸರಿ:
ಕಾಗಿನೆಲೆ ಕನಕ ಉದ್ಯಾನದ ಆಸುಪಾಸಿನಲ್ಲಿ ಸಸಿಗಳನ್ನು ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಬಸವರಾಜ ಶಿವಣ್ಣನವರ, ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭ ಮಾಡುವಂತೆ ತಿಳಿಸಿದರು.