ಸಾರಾಂಶ
ರಾಜ್ಯ ಮಾಲಿನ್ಯ ಮತ್ತು ಪರಿಸರ ನಿಯಂತ್ರಣ ಮಂಡಳಿಗಳು ಜಾರಿಗೊಳಿಸಿದ ನಿಯಮಗಳನ್ನು ಕಂಪನಿ ಸರಿಯಾಗಿ ಪಾಲನೆ ಮಾಡದೇ ಅವುಗಳನ್ನು ಉಲ್ಲಂಘನೆ ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ಚಿಂಚೋಳಿ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿ ತಾಲೂಕಿನಲ್ಲಿ ಸ್ಥಾಲಿಪಿಸಿರುವ ಸಿದ್ದಸಿರಿ ಇಥೆನಾಲ್ ಮತ್ತು ಪವರ್ ಘಟಕವು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಕಾರ್ಖಾನೆಗೆ ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಭೇಟಿ ನೀಡಿ ಕಾರ್ಖಾನೆ ಮುಚ್ಚುವಂತೆ ಸೂಚಿಸಿದ್ದಾರೆ.ಕಲಬುರಗಿ-ಚಿಂಚೋಳಿ ರಾಜ್ಯಹೆದ್ದಾರಿ ಪಕ್ಕದಲ್ಲಿರುವ ಸಿದ್ದಸಿರಿ ಇಥೆನಾಲ್ ಪವರ್ ಘಟಕಕ್ಕೆ ಶನಿವಾರ ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ-ನಿರ್ದೇಶಕ ಶಾಂತಗೌಡ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಸಹಾಯಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧಿಕಾರಿ ಶಾರದಾ ಅವರು ಭೇಟಿ ನೀಡಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಮಾತನಾಡಿದರು.
ರಾಜ್ಯ ಮಾಲಿನ್ಯ ಮತ್ತು ಪರಿಸರ ನಿಯಂತ್ರಣ ಮಂಡಳಿಗಳು ಜಾರಿಗೊಳಿಸಿದ ನಿಯಮಗಳನ್ನು ಕಂಪನಿ ಸರಿಯಾಗಿ ಪಾಲನೆ ಮಾಡದೇ ಅವುಗಳನ್ನು ಉಲ್ಲಂಘನೆ ಮಾಡಲಾಗಿದೆ. ಕಂಪನಿಗೆ ಹಂಚಿಕೆಯಾದ ಗ್ರಾಮಗಳ ವಿವರ ಮತ್ತು ಕಬ್ಬು ನುರಿಸುತ್ತಿರುವ ಮಾಹಿತಿ ಅಲ್ಲದೇ ಮುಲ್ಲಾಮಾರಿ ನದಿ ನೀರಿನ ಬಳಕೆ ಕುರಿತು ಅನುಮತಿ ಸೂಕ್ತ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದಿರುವ ಬಗ್ಗೆ ಹಾಗೂ ಸ್ಥಳಿಯ ಪುರಸಭೆಗೆ ತೆರಿಗೆ ಪಾವತಿಸದೇ ಇರುವುದು ಹಾಗೂ ಕಂಪನಿಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಯಾಕೆ ಪಡೆದಿರುವುದಿಲ್ಲ. ಕಂಪನಿಯ ಎಪ್.ಆರ್.ಪಿ. ನಿಗದಿಯಾಗಿರುವುದಿಲ್ಲವೆಂದು ಕಂಪನಿ ಸಿಬ್ಬಂದಿಗಳಿಗೆ ಸಹಾಯಕ ಆಯುಕ್ತರು ಪ್ರಶ್ನಿಸಿದರು.ಮಹಾರಾಷ್ಟ್ರ ರಾಜ್ಯಗಳ ವಿವಿಧ ಜಿಲ್ಲೆಗಳಿಂದ ಲಾತೂರ, ನಾಂದೇಡ ಜಿಲ್ಲೆಗಳಿಂದ ಕಬ್ಬುಗಳನ್ನು ಇಲ್ಲಿಗೆ ಸಾಗಿಸುತ್ತಿರುವ ಬಗ್ಗೆ ಕೆಲವರಿಂದ ದೂರುಗಳು ಬಂದಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದರು. ಸಿದ್ದಸಿರಿ ಇಥೆನಾಲ್ ಪವರ ಘಟಕವು ಇಲ್ಲಿಯವರೆಗೆ ೨,೪೬,೪೭೭ ಟನ್ ಕಬ್ಬನ್ನು ನುರಿಸಲಾಗಿದೆ ಎಂದು ಕಂಪನಿ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಕ್ಕರೆ ಕಾರ್ಖಾನೆ ಆವರಣದಲ್ಲಿ ೧೬ ಸಾವಿರ ಟನ್ ಕಬ್ಬು ತುಂಬಿದೆ ರೈತರ ಹೊಲಗಳಲ್ಲಿ ಕತ್ತರಿಸಿ ಹಾಕಿದ ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗೆ ಸಾಗಿಸಲು ವ್ಯವಸ್ಥೆಯನ್ನು ರೈತರು ಮಾಡಿಕೊಳ್ಳಬೇಕು ಎಂದು ಸೇಡಂ ಸಹಾಯಕ ಆಯುಕ್ತರಾದ ಆಶಪ್ಪ ಪೂಜಾರಿ ಸೂಚನೆ ನೀಡಿದರು.ಕಂಪನಿಯೂ ಸರಕಾರದ ಆದೇಶವನ್ನು ಪಾಲನೆ ಮಾಡಲಾಗುವುದು ಯಾವುದೇ ಉಲ್ಲಂಘನೆ ಆಗದಂತೆ ಇನ್ನುಮುಂದೆ ಮಾಡುವುದಿಲ್ಲವೆಂದು ಕಂಪನಿ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.