ಸಾರಾಂಶ
ಕಳೆದ ವರ್ಷ ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಬೇಕೆಂಬ ದೈವದ ಅಭಯಕ್ಕೆ ಜನ ತಲೆ ಬಾಗಿದ್ದು, ಶಿರಾಡಿ ದೈವ ನರ್ತನದ ಜವಾಬ್ದಾರಿಯ ದೀಕ್ಷೆ ಬೂಳ್ಯವನ್ನು ಕಾಂತು ಅಜಿಲರ ಪುತ್ರ ಮೋನಪ್ಪ ಮೂಲಂಗೇರಿ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಸುಳ್ಯತುಳುನಾಡಿನ ದೈವದ ಕಥಾ ಹಂದರ ಇರುವ ಕಾಂತಾರ ಚಿತ್ರವನ್ನು ನೆನಪಿಸುವಂತಹ ಘಟನೆಯೊಂದಕ್ಕೆ ಸುಳ್ಯ ತಾಲೂಕಿನ ಎಡಮಂಗಲ ಸಾಕ್ಷಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಬೇಕೆಂಬ ದೈವದ ಅಭಯಕ್ಕೆ ಜನ ತಲೆ ಬಾಗಿದ್ದು, ಶಿರಾಡಿ ದೈವ ನರ್ತನದ ಜವಾಬ್ದಾರಿಯ ದೀಕ್ಷೆ ಬೂಳ್ಯವನ್ನು ಕಾಂತು ಅಜಿಲರ ಪುತ್ರ ಮೋನಪ್ಪ ಮೂಲಂಗೇರಿ ಪಡೆದಿದ್ದಾರೆ.2023ರ ಮಾರ್ಚ್ 30ರಂದು ಚಾರ್ವಾಕ ಸಮೀಪದ ಇಡ್ಯಡ್ಕದಲ್ಲಿ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ಶಿರಾಡಿ ದೈವ ನರ್ತಕ ಕಾಂತು ಅಜಿಲರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಭಾರೀ ಸುದ್ದಿ ಮಾಡಿತ್ತು.ಕಾಂತು ಅಜಿಲರ ಅಕಾಲಿಕ ಮರಣದ ಬಳಿಕ ಮುಂದಿನ ದೈವ ನರ್ತಕರ ಬಗ್ಗೆ ದೈವಜ್ಞರ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ದೈವ ನರ್ತಿಸುತ್ತಾ ಸಾವನ್ನಪ್ಪಿದ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮೂಲಂಗೇರಿ ಮತ್ತು ದಿನೇಶ್ ಮೂಲಂಗೇರಿ ಅವರೇ ಮುಂದೆ ದೈವ ನರ್ತನದ ಜವಾಬ್ದಾರಿ ಹೊರಬೇಕು ಅಂತ ಕಂಡು ಬಂದಿತ್ತು. ಇತ್ತೀಚೆಗೆ ಎಡಮಂಗಲದ ಮರೋಳಿಯಲ್ಲಿ ನಡೆದ ಗ್ರಾಮ ದೈವದ ನೇಮದ ಸಂದರ್ಭ ಶಿರಾಡಿ ದೈವವನ್ನು ಕೊಲ್ಲಮೊಗ್ರದ ಬೊಳಿಯ ಅಜಿಲರು ಕಟ್ಟಿದ್ದರು. ನೇಮೋತ್ಸವದ ಸಂದರ್ಭ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕೆಂದು ವಿವರಿಸುವ ಸಂದರ್ಭ ಭಾವನಾತ್ಮಕವಾಗಿತ್ತು.ದೈವ ನರ್ತಕ ದೀಕ್ಷೆ ಬೂಳ್ಯ: ದೈವ ನರ್ತಕ ದೀಕ್ಷೆ ಬೂಳ್ಯ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ದೈವ ತನ್ನ ಆವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ. ಅದರಂತೆ ದೈವವು ಶಿರಾಡಿ ದೈವದ ನರ್ತನ ಸೇವೆ ನಡೆಸುವ ಮೋನಪ್ಪರಿಗೆ ದೀಕ್ಷೆ ಬೂಳ್ಯ ನೀಡಿತು. ಶಿರಾಡಿ ದೈವವನ್ನು ದೀಕ್ಷೆ ಬೂಳ್ಯ ಪಡೆದ ನಂತರವೇ ಕಟ್ಟಬೇಕೆಂಬುದೂ ನಿಯಮವಾಗಿದೆ. ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ.ದೈವದ ನರ್ತನ ಜವಾಬ್ದಾರಿ ಪಡೆದ ಯುವಕರ ಕಣ್ಣಲ್ಲಿ ಈ ಸಂದರ್ಭ ಆನಂದಭಾಷ್ಪ ಕಂಡರೆ, ಕುಟುಂಬದ ಸದಸ್ಯರಲ್ಲಿ ಧನ್ಯತೆಯ ಭಾವ ಕಂಡು ಬಂದಿತ್ತು.ಕಾಂತಾರ ಸಿನಿಮಾದ ಕಥೆಯಲ್ಲೂ ಇಂಥದ್ದೇ ಕಥಾ ಹಂದರವಿರುವ ಕಾರಣ ಈ ಘಟನೆಯೂ ವ್ಯಾಪಕ ಪ್ರಚಾರಕ್ಕೆ ಕಾರಣವಾಯಿತು. ಕೆಲವು ದಿನಗಳ ಹಿಂದಷ್ಟೇ ಎಡಮಂಗಲ ದೇವಸ್ಥಾನದ ಜಾತ್ರೆಗೆ ಪೂರ್ವಭಾವಿಯಾಗಿ ಶಿರಾಡಿ ದೈವದ ನೇಮ ನಡೆದಿದ್ದು, ಈ ವೇಳೆ ಮೋನಪ್ಪ ಅಜಿಲರೇ ದೈವ ನರ್ತಕರಾಗಿದ್ದರು.