ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಜನಸ್ಪಂದನ ಉದ್ದೇಶ

| Published : Nov 01 2024, 12:05 AM IST

ಸಾರಾಂಶ

ನಾನಾ ಕೆಲಸಗಳಿಗಾಗಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸುವ ಉದ್ದೇಶದಿಂದ ಆಯಾ ಗ್ರಾ.ಪಂಗಳ ಮಟ್ಟದಲ್ಲಿ ಜನಸ್ಪದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಜನರು ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ನಿಯಂತ್ರಿಸಿ, ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸುವ ಹಾಗೂ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒದಗಿಸುವಂತಹ ಜನಸ್ಪಂದನಾ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು.

ತಾಲೂಕಿನ ಗೂಳೂರು ಹೋಬಳಿ ಕೊತ್ತಕೋಟೆ ಗ್ರಾ.ಪಂ ವ್ಯಾಪ್ತಿಯ ವರ್ಣಂಪಲ್ಲಿ ಕ್ರಾಸ್‍ನಲ್ಲಿ ತಾ.ಪಂ, ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಾರ್ಗಾನುಕುಂಟೆ, ಕೊತ್ತಕೋಟೆ ಗ್ರಾ.ಪಂಗಳ ವ್ಯಾಪ್ತಿಯ ನಾಗರೀಕರ ಕುಂದುಕೊರತೆ ಬಗೆಹರಿಸಲು ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಚೇರಿಗೆ ಅಲೆದಾಟ ತಪ್ಪಬೇಕು

ನಾನಾ ಕೆಲಸಗಳಿಗಾಗಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸುವ ಉದ್ದೇಶದಿಂದ ಆಯಾ ಗ್ರಾ.ಪಂಗಳ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಜನಸ್ಪದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ವಿನಾ ಕಾರಣ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳ ಸುತ್ತ ತಿರುಗಾಡಿಸಬೇಡಿ ಎಂದು ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಗೃಹ ಲಕ್ಷ್ಮೀ, ಅನ್ನಭಾಗ್ಯ, ಪಡಿತರ , ಜಮೀನು ಸಮಸ್ಯೆ, ವಿದ್ಯುತ್, ರಸ್ತೆ ಸೇರಿದಂತೆ 227ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗಿದೆ ಉಳಿದ ಹಲವು ಸಮಸ್ಯೆಗಳಿಗೆ ಒಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಫಲಾನುಭವಿಗಳಿಗೆ ಆದೇಶ ಪತ್ರ

ಕಂದಾಯ ಇಲಾಖೆ ವ್ಯಾಪ್ತಿಯ 450 ಮಂದಿಗೆ ಪಿಂಚಣಿ, 400 ಫವತಿ ಖಾತೆ ಸೇರಿದಂತೆ ಭಾಗ್ಯಲಕ್ಷ್ಮೀ ಬಾಂಡ್, ಸಾಗುವಳಿ ಚೀಟಿ, ಮನೆ ಹಾನಿ, ಆಕಸ್ಮಿಕ ಮರಣಹೊಂದಿರುವ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳ ಫಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಮನೀಷಾ, ಡಿ.ಹೆಚ್.ಓ ಮಹೇಶ್ ಕುಮಾರ್, ತಾ.ಪಂ ಇಒ ರಮೇಶ್, ಬಿಒ ವೆಂಕಟೇಶ್, ಸಿಡಿಪಿಓ ರಾಮಚಂದ್ರಪ್ಪ, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರದೀಪ್, ಟಿಹೆಚ್‍ಓ ಡಾ.ಸತ್ಯನಾರಾಯಣರೆಡ್ಡಿ, ಬೆಸ್ಕಾಂ ಎಇಇ ಸೋಮಶೇಖರ್, ತಾ.ಪಂ ಕೆಡಿಪಿ ಸದಸ್ಯ ರಘುನಾಥರೆಡ್ಡಿ ಮತ್ತಿತರರು ಇದ್ದರು.